ದೀಸ್‌ಪುರ್(ಮೇ.14): ನೀ ಹಿಂದೂ, ನೀ ಮುಸಲ್ಮಾನ ಎಂಬುದು ಈ ದೇಶದ ರಾಜಕೀಯ ಕ್ಷೇತ್ರದ ಸುತ್ತ ಮಾತ್ರ ಗಿರಕಿ ಹೊಡೆಯುತ್ತದೆ. ಅದನ್ನು ದಾಟಿ ಸಾಮಾಜಿಕ ಕ್ಷೇತ್ರಕ್ಕೆ ಕಾಲಿಟ್ಟಾಗ ಪ್ರತಿಯೊಬ್ಬರಲ್ಲೂ ಮಾನವೀಯತೆಯೊಂದೇ ಕಾಣಸಿಗುತ್ತದೆ.

ಇದು ರಂಜಾನ್ ತಿಂಗಳು. ಜಗತ್ತಿನಾದ್ಯಂತ ಮುಸ್ಲಿಂ ಭಾಂಧವರು ರಂಜಾನ್ ಉಪವಾಸದಲ್ಲಿ ನಿರತರಾಗಿದ್ದಾರೆ. ಭಾರತದಲ್ಲೂ ಮುಸ್ಲಿಂ ಭಾಂಧವರು ಅತ್ಯಂತ ಶ್ರದ್ಧೆಯಿಂದ ರಂಜಾನ್ ಉಪವಾಸ ಕೈಗೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಈ ಮಧ್ಯೆ ಹಿಂದೂ ಮಹಿಳೆಯೋರ್ವಳಿಗೆ ರಕ್ತದಾನ ಮಾಡಲು ಮುಸ್ಲಿಂ ವ್ಯಕ್ತಿಯೋರ್ವ ರಂಜಾನ್ ಉಪವಾಸ ಕೈಬಿಟ್ಟ ಅಪರೂಪದ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಇಲ್ಲಿನ ಸೋನಿತ್ಪುರ್ ಬಳಿಯ ದೇಖಿಜುಲಿ ಎಂಬ ಗ್ರಾಮದ ಮುನ್ನಾ ಅನ್ಸಾರಿ ಎಂಬ ವ್ಯಕ್ತಿ, ಇಲ್ಲಿನ ಬಿಸ್ವನಾಥ್ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 85 ವರ್ಷದ ರೇಬತಿ ಬೋರಾ ಎಂಬ ವೃದ್ಧೆಗೆ ರಕ್ತ ನೀಡಲು ರಂಜಾನ್ ಉಪವಾಸವನ್ನು ಅರ್ಧಕ್ಕೆ ಕೈಬಿಟ್ಟಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ತಾಯಿಗೆ ರಕ್ತ ಕೊಡಿಸಲು ಪುತ್ರ ಅನಿಲ್ ಪ್ರಯತ್ನಿಸುತ್ತಿದ್ದರು. ಆದರೆ ಬ್ಲಡ್ ಬ್ಯಾಂಕ್ ನಲ್ಲಿ ರೇಬತಿ ಅವರ ರಕ್ತದ ಗುಂಪಿನ ರಕ್ತವಿರದ ಕಾರಣ, ರಕ್ತಕ್ಕಾಗಿ ಅನ್ಸಾರಿ ಅವರನ್ನು ಕೇಳಲಾಗಿತ್ತು.

ತಕ್ಷಣವೇ ಆಸ್ಪತ್ರೆಗೆ ಧಾವಿಸಿದ ಅನ್ಸಾರಿ, ರೇಬತಿ ಅವರಿಗೆ ರಕ್ತ ಕೊಟ್ಟು ಆಕೆಯ ಜೀವ ಉಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡುವಾಗ ಅನಿಲ್ ಕಣ್ಣಾಲಿಗಳು ತುಂಬಿ ಬಂದಿದ್ದು ವಿಶೇಷವಾಗಿತ್ತು. 

ರಕ್ತದಾನ ಮಾಡಿದ ಬಳಿಕ ಹಣ್ಣು ಹಂಪಲು ತಿನ್ನುವುದು ಕಡ್ಡಾಯ. ಹೀಗಾಗಿ ರಂಜಾನ್ ಉಪವಾಸದಲ್ಲಿದ್ದ ಅನ್ಸಾರಿ, ವೈದ್ಯರ ಸಲಹೆ ಮೇರೆಗೆ ಹಣ್ಣು ಸೇವಿಸಿ ರಂಜಾನ್ ಉಪವಾಸವನ್ನು ಅವಧಿಗೂ ಮೊದಲೇ ಮುರಿದಿದ್ದಾರೆ. ಆದರೆ ಅವರ ಮಾನವೀಯತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.