ಚಿಕ್ಕಮಗಳೂರು : ಹೆಂಡತಿ ಪರ ಪುರುಷನ ತೆಕ್ಕೆಯಲ್ಲಿ ಇದ್ದದ್ದನ್ನ ಕಂಡ ವ್ಯಕ್ತಿಯೋರ್ವ ಆಕ್ರೋಶಗೊಂಡು ತನ್ನ ಹೆಂಡತಿಯ ತಲೆಯನ್ನ ಕಡಿದು, ರುಂಡದೊಂದಿಗೆ 20 ಕಿ.ಮೀ, ಬೈಕ್‍ನಲ್ಲಿ ಸಂಚಾರ ಮಾಡಿ ತಲೆ ಸಮೇತ ಸ್ಟೇಷನ್‍ಗೆ ಬಂದು ಸರಂಡರ್ ಆಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಜ್ಜಂಪುರ ಸಮೀಪದ ಶಿವನಿ ರೈಲ್ವೆ ಸ್ಟೇಷನ್ ಬಳಿ ನಡೆದಿದೆ. 

ಸತೀಶ್ ತನ್ನ ಹೆಂಡತಿಯ ತಲೆಯನ್ನ ಕಡಿದ ವ್ಯಕ್ತಿ. 9 ವರ್ಷಗಳ ಹಿಂದೆ ರೂಪ ಎಂಬುವಳನ್ನ ಪ್ರೀತಿಸಿ ಮದುವೆಯಾಗಿದ್ದ ಸತೀಶ್‍ಗೆ ಇಬ್ಬರು ಮಕ್ಕಳು. ಬೆಂಗಳೂರಿನಲ್ಲಿ ಡ್ರೈವರ್ ವೃತ್ತಿ ಮಾಡುತ್ತಿದ್ದ ಸತೀಶ್  ಶಿವನಿಗೆ ಬಂದು ಮಾಂಸದ ಅಂಗಡಿ ಇಟ್ಟುಕೊಂಡು ಹೆಂಡತಿ ಜೊತೆಗಿದ್ದ. 

ಮೃತ ರೂಪಾಗೆ ಅದೇ ಗ್ರಾಮದ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರಿಂದ ಇಬ್ಬರ ನಡುವೆ ಸಾಕಷ್ಟು ಗಲಾಟೆ ಕೂಡ ನಡೆದು, ಸ್ಟೇಷನ್ ಮೆಟ್ಟಿಲು ಕೂಡ ಹತ್ತಿದ್ದರು. ಬಳಿಕ ಈ ಬಗ್ಗೆ ಪೊಲೀಸರು ಹಾಗೂ ಊರಿನ ಹಿರಿಯರು ಸೇರಿ ರಾಜಿ ಕೂಡ ಮಾಡಿದ್ದರು. 

ನಿನ್ನೆ ಸಂಜೆ ಮತ್ತೆ ಇಬ್ಬರು ಒಟ್ಟಿಗೆ ಇರುವುದನ್ನು ಕಂಡಿದ್ದ ಸತೀಶ್, ರೂಪಾ ಜೊತೆಗಿದ್ದ ವ್ಯಕ್ತಿಯ ಮೇಲೆ ಮಚ್ಚು ಬೀಸಿದ್ದಾನೆ. ಆತ ತಪ್ಪಿಸಿಕೊಂಡಿದ್ದರಿಂದ ಹೆಂಡತಿಯ ತಲೆ ಕಡಿದು ಬೈಕ್‍ನಲ್ಲಿ 20 ಕಿ.ಮೀ. ದೂರದ ಅಜ್ಜಂಪುರ ಠಾಣೆಗೆ ಬಂದು ಶರಣಾಗಿದ್ದಾನೆ. 

 ಮಕ್ಕಳನ್ನ ಮದುವೆ ಮಾಡಿಲ್ಲ, ಮೂರು ಲಕ್ಷ ಸಾಲ ಮಾಡಿ ಆತನಿಗೆ ನೀಡಿದ್ದಾಳೆ, ಪ್ರೀತಿಸಿ ಮದುವೆಯಾಗಿ ಚಿನ್ನದಂತೆ ನೋಡಿಕೊಂಡಿದ್ದರೂ ಕೂಡ ಹೀಗೆ ಮಾಡಿದ್ದಾಳೆಂದು ಪೊಲೀಸರ ಮುಂದೆ ಅಲವತ್ತುಕೊಂಡಿದ್ದಾನೆ. ನನಗೆ ಯಾವ ಶಿಕ್ಷೆ ಕೊಡುವಿರೋ ಕೊಡಿ, ನಾನು ಬಿಡುಗಡೆ ಆದ ಮೇಲೆ ಅವನನ್ನ ಹುಡುಕಿ ಅವನನ್ನೂ ಕೊಂದು ಮತ್ತೆ ಠಾಣೆಗೆ ಬರುತ್ತೇನೆ ಎಂದು ಹೇಳಿದ್ದಾನೆ ಎನ್ನಲಾಗಿದೆ.