ಒಂದು ಕಡೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳು ತೀರ್ಮಾನಿಸುತ್ತಿರುವ ಬೆನ್ನಲ್ಲೇ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಮೀಟರ್ ಬಡ್ಡಿಗಾಗಿ ವ್ಯಕ್ತಿಯ ಮೇಲೆ ಮನ ಬಂದಂತೆ ಥಳಿಸಲಾಗಿದೆ. 

ಸೂಲಿಬೆಲೆ : ಬಡ್ಡಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬನನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ನಡೆದಿದೆ. ಬಡವರನ್ನು ಋುಣಮುಕ್ತರ ಸಲುವಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೀಟರ್‌ ಬಡ್ಡಿ ಮೇಲೆ ಅಂಕುಶ ತೊಡಿಸಲು ಹೊರಟಿರುವ ಸಂದರ್ಭದಲ್ಲೇ ನಡೆದಿರುವ ಈ ಘಟನೆ ಜನತೆಯನ್ನು ಬೆಚ್ಚಿಬೀಳಿಸಿದೆ.

ಹೊಸಕೋಟೆ ಸಮೀಪದ ಮುತ್ಸಂದ್ರ ಗ್ರಾಮದ ನಿವಾಸಿ ನಾರಾಯಣಸ್ವಾಮಿ(32) ಮೀಟರ್‌ ಬಡ್ಡಿ ದಂಧೆಕೋರರಿಂದ ಹಲ್ಲೆಗೊಳಗಾದ ವ್ಯಕ್ತಿ. ಅಪಹರಣಕಾರರ ಬಲೆಯಿಂದ ತಪ್ಪಿಸಿಕೊಂಡಿರುವ ಅವರು ಪ್ರಾಣಾಪಾಯದಿಂದ ಪಾರಾಗಿದ್ದು ಸದ್ಯ ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ:

ಮುತ್ಸಂದ್ರ ಗೇಟಿನ ಸುಗುಣ ಪೌಲ್ಟ್ರಿ ಕಾರ್ಖಾನೆ ಮುಂಭಾಗದಲ್ಲಿ ಹೊಟೇಲ್‌ ಇಟ್ಟು ಜೀವನ ನಡೆಸುತ್ತಿದ್ದ ನಾರಾಯಣಸ್ವಾಮಿ ಮೀಟರ್‌ ಬಡ್ಡಿ ವ್ಯವಹಾರದಲ್ಲಿ ಮಧ್ಯವರ್ತಿಯಾಗಿದ್ದರು ಎಂದು ಹೇಳಲಾಗಿದೆ. ಕೆಲ ವರ್ಷಗಳಿಂದ ನಾರಾಯಣಸ್ವಾಮಿ ಇದೇ ಹೊಸಕೋಟೆ ತಾಲೂಕಿನ ಕುಂಬಳಹಳ್ಳಿ ಗ್ರಾಮದ ಕೆಲ ವ್ಯಕ್ತಿಗಳ ಬಳಿ ಬಡ್ಡಿಗೆ ಹಣ ತಂದು ತಮ್ಮ ಹಾಗೂ ಸುತ್ತಮುತ್ತಲಿನ ಊರಿನ ಜನರಿಗೆ ಕೊಡಿಸಿದ್ದರು. ಈ ಹಣ ಪಡೆದವರು ವಾಪಸ್‌ ನೀಡದೆ ವಿಳಂಬ ಮಾಡಿದ್ದರು. ಅಲ್ಲದೆ ಕೆಲವರು ಊರು ಬಿಟ್ಟಿದ್ದರು. ಆದರೆ ಹಣ ನೀಡಿದವರು ಹಿಂದಿರುಗಿಸುವಂತೆ ನಾರಾಯಣಸ್ವಾಮಿ ಮೇಲೆ ಒತ್ತಡ ಹಾಕುತ್ತಿದ್ದರು. ಇದೇ ಕಾರಣಕ್ಕೆ ಎರಡ್ಮೂರು ಬಾರಿ ಅವರನ್ನು ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದರು ಎನ್ನಲಾಗಿದೆ.

ಭಾನುವಾರ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ನಾರಾಯಣಸ್ವಾಮಿ ನಡೆಸುತ್ತಿದ್ದ ಹೊಟೇಲ್‌ ಬಳಿ ಅಲ್ಟೋ ಕಾರಿನಲ್ಲಿ ಬಂದ ಶಶಿ, ಪ್ರಕಾಶ್‌ ಮತ್ತು ಇಬ್ಬರು ನಾರಾಯಣಸ್ವಾಮಿಯನ್ನು ಏಕಾಏಕಿ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದಾರೆ. ಕಾಡುಗೋಡಿ ಸಮೀಪದ ಬನಹಳ್ಳಿ ಬಳಿ ಕರೆದುಕೊಂಡು ಹೋದ ತಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದಾರೆ. ಹಣವನ್ನು ಜನರಿಂದ ವಾಪಸ್‌ ಕೊಡಿಸುತ್ತೇನೆ ಆದರೆ ಮೀಟರ್‌ ಬಡ್ಡಿ ಹಾಕಬೇಡಿ ಎಂದು ಬೇಡಿಕೊಂಡರು ಬಿಡದೆ ಹಲ್ಲೆ ಮಾಡಿದ್ದಾರೆ.

ಅಪಹರಣಕಾರರಿಂದ ಹಲ್ಲೆಗೆ ಒಳಗಾದ ನಾರಾಯಣಸ್ವಾಮಿಯ ಕತ್ತಲಲ್ಲಿ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡು ಬಂದು ಖಾಸಗಿ ಶಾಲೆಯೊಂದರ ಸೆಕ್ಯೂರಿಟಿ ಗಾರ್ಡ್‌ ಮೊಬೈಲ್‌ನಿಂದ ತನ್ನ ಅಣ್ಣನಿಗೆ ಕಾಲ್‌ ಮಾಡಿ ಕರೆಯಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಸೂಲಿಬೆಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಲೆ ಮಾರಿಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.