ಪುನೀತ್ ರಾಜ್ ಕುಮಾರ್ ಅಭಿನಯ ಚಲನಚಿತ್ರ ಅಂಜನಿಪುತ್ರ ಗುರುವಾರ ತೆರೆಕಂಡಿತು. ಶಾರದಾ ಚಿತ್ರಮಂದಿರಕ್ಕೆ ಬೆಳಗ್ಗೆ ಪ್ರದರ್ಶನಕ್ಕೆ ಸಿನಿಮಾ ವೀಕ್ಷಣೆಗೆ ತೆರಳಿದ್ದ ಆನಂದ್, ಅಲ್ಲಿ ಮೊಬೈಲ್‌ನಲ್ಲಿ ಚಿತ್ರವನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ.

ಬೆಂಗಳೂರು(ಡಿ.22): ತನ್ನ ಪ್ರೀತಿ ಮಡದಿಯ ನೆಚ್ಚಿನ ನಾಯಕ ಪುನೀತ್ ರಾಜ್‌ಕುಮಾರ್ ಅವರು ನಟಿಸಿರುವ ‘ಅಂಜನಿಪುತ್ರ’ ಚಲನಚಿತ್ರವನ್ನು ಚಿತ್ರಮಂದಿರದಲ್ಲೇ ಮೊಬೈಲ್ ಮೂಲಕ ಚಿತ್ರೀಕರಿಸುತ್ತಿದ್ದ ಕಾರ್ಮಿಕನೊಬ್ಬನಿಗೆ ಪೊಲೀಸರು ಬುದ್ಧಿವಾದ ಹೇಳಿ ಕಳುಹಿಸಿರುವ ಘಟನೆ ಗುರುವಾರ ನಡೆದಿದೆ.

ಚಿಕ್ಕಪೇಟೆ ಬಟ್ಟೆ ಅಂಗಡಿ ಕೆಲಸಗಾರ ಆನಂದ್ ಕುಮಾರ್ ಎಂಬಾತನೇ ವಿವಾದಕ್ಕೆ ಸಿಲುಕಿದ್ದು, ‘ಶಾರದಾ’ ಚಿತ್ರಮಂದಿರದಲ್ಲಿ ಬೆಳಗ್ಗೆ ಪ್ರದರ್ಶನದ ವೇಳೆ ಈ ಘಟನೆ ನಡೆದಿದೆ. ಪುನೀತ್ ರಾಜ್ ಕುಮಾರ್ ಅಭಿನಯ ಚಲನಚಿತ್ರ ಅಂಜನಿಪುತ್ರ ಗುರುವಾರ ತೆರೆಕಂಡಿತು. ಶಾರದಾ ಚಿತ್ರಮಂದಿರಕ್ಕೆ ಬೆಳಗ್ಗೆ ಪ್ರದರ್ಶನಕ್ಕೆ ಸಿನಿಮಾ ವೀಕ್ಷಣೆಗೆ ತೆರಳಿದ್ದ ಆನಂದ್, ಅಲ್ಲಿ ಮೊಬೈಲ್‌ನಲ್ಲಿ ಚಿತ್ರವನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ. ಇದನ್ನು ಗಮನಿಸಿದ ಪ್ರೇಕ್ಷಕರೊಬ್ಬರು ಈ ಬಗ್ಗೆ ಚಿತ್ರಮಂದಿರದ ಸಿಬ್ಬಂದಿಗೆ ಮಾಹಿತಿ ನೀಡಿದರು.

ತಕ್ಷಣವೇ ಆ ಸಿಬ್ಬಂದಿ, ಆನಂದ್‌ಕುಮಾರ್‌ನನ್ನು ಹಿಡಿದು ಎಸ್.ಜೆ. ಪಾರ್ಕ್ ಠಾಣೆ ಪೊಲೀಸರಿಗೊಪ್ಪಿಸಿದರು. ನಂತರ ಆತನನ್ನು ಠಾಣೆ ಕರೆದು ವಿಚಾರಿಸಿದಾಗ ಸತ್ಯ ಗೊತ್ತಾಯಿತು ಎಂದು ತಿಳಿದು ಬಂದಿದೆ. ನನ್ನ ಪತ್ನಿಗೆ ಅಪ್ಪು (ಪುನೀತ್ ರಾಜ್‌ಕುಮಾರ್) ಅಂದರೆ ಪ್ರಾಣ. ಆಕೆ ಸಲುವಾಗಿ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದೆ. ಬೇರೆ ಯಾವುದೇ ದುರುದ್ದೇಶವಿರಲಿಲ್ಲ ಎಂದು ಆನಂದ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ. ಅಲ್ಲದೆ, ಅವನ ಮೊಬೈಲ್ ಸಹ ಉತ್ತಮ ಗುಣಮಟ್ಟದಲ್ಲಿರಲಿಲ್ಲ. ಹಾಗಾಗಿ ಆತನಿಗೆ ಮತ್ತೆ ಈ ರೀತಿ ನಡೆದುಕೊಳ್ಳದಂತೆ ಎಚ್ಚರಿಕೆ ನೀಡಿ ಕಳುಹಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.