ಕೋಲ್ಕತ್ತಾ[ಮಾ.20]: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರದಂದು ತನ್ನ ಧರ್ಮವನ್ನು ಅವಹೇಳನ ಮಾಡಿದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ತಾಕತ್ತಿದ್ದರೆ 'ಸಂಸ್ಕೃತ ಶ್ಲೋಕ' ಪಠಿಸುವುದರಲ್ಲಿ ತನ್ನನ್ನು ಸೋಲಿಸಿ ತೋರಿಸಿ ಎಂದು ಸವಾಲೆಸೆದಿದ್ದಾರೆ. 

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ದೀದಿ 'ನಮ್ಮ ಸರ್ಕಾರವು ರಾಜ್ಯದಲ್ಲಿ ಹಲವಾರು ದೇಗುಲಗಳ ಜೀರ್ಣೋದ್ಧಾರ ಕಾರ್ಯ ನಡೆಸಿದೆ. ಆದರೆ ಬಿಜೆಪಿ ಚುನಾವಣೆಗೂ ಮೊದಲು ರಾಮ ಮಂದಿರ ವಿಚಾರವನ್ನು ಕೇವಲ ತನ್ನ ರಾಜಕೀಯ ಹೇಳಿಕೆಗಳಿಗೆ ಸೀಮಿತಗೊಳಿಸಿದೆ' ಎಂದಿದ್ದಾರೆ.

ಈ ವಿಚಾರವಾಗಿ ಮಾತನಾಡುತ್ತಾ 'ಪೂಜೆ ಎಂದರೆ ಹಣೆಗೆ ತಿಲಕ ಹಾಕಿಕೊಳ್ಳುವುದಷ್ಟೇ ಅಲ್ಲ. ಶ್ಲೋಕ ಹಾಗೂ ಮಂತ್ರಗಳ ಅರ್ಥವೂ ತಿಳಿದಿರಬೇಕು. ಮಂತ್ರೋಚ್ಛಾರದಲ್ಲಿ ನನ್ನೊಂದಿಗೆ ಸ್ಪರ್ಧಿಸಲು ನಾನು ಮೋದಿ ಹಾಗೂ ಅಮಿತ್ ಶಾಗೆ ಚಾಲೆಂಜ್ ಮಾಡುತ್ತೇನೆ' ಎಂದಿದ್ದಾರೆ. ಅಲ್ಲದೇ 'ಕೆಲವರು ನನ್ನು ಧರ್ಮದ ಮೇಲೆ ಸವಾಲೆಸೆಯುತ್ತಿದ್ದಾರೆ. ಅವರಿಗೆಲ್ಲರಿಗೂ ನನ್ನದು ಮಾನವೀಯ ಧರ್ಮ ಎಂದು ಹೇಳಲಿಚ್ಛಿಸುತ್ತೇನೆ. ಈ ವಿಚಾರವಾಗಿ ಬೇರೆಯವರು ಪಾಠ ಹೇಳುವ ಅಗತ್ಯವಿಲ್ಲ' ಎಂದು ಜರಿದಿದ್ದಾರೆ. 

ಹೋಳಿ ವಿಚಾರವಾಗಿ ಮಾತನಾಡಿದ ದೀದಿ 'ನಾನು ರಾಜ್ಯದ್ಲಲಿ ಪೂಜೆ ನಡೆಸಲು ಬಿಡುವುದಿಲ್ಲ ಎಂಬ ಆರೋಪ ಮಾಡುತ್ತಿದ್ದಾರೆ. ಅವರೆಲ್ಲರೂ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಎಷ್ಟು ದೇವಸ್ಥಾನಗಳು ನಿರ್ಮಿಸಲಾಗಿದೆ ಎಂದು ನೋಡಲೇಬೇಕು' ಎಂದಿದ್ದಾರೆ.