ಕೋಲ್ಕತಾ[ಜು.30]: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಭದ್ರ ನೆಲೆ ಕಂಡುಕೊಂಡಿರುವುದರಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚಿಂತಾಕ್ರಾಂತರಾಗಿದ್ದಾರೆ. ಅಲ್ಲದೆ, 2021ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಹೇಗೆ ಮಣಿಸಬೇಕೆಂಬ ಲೆಕ್ಕಾಚಾರ ಬ್ಯಾನರ್ಜಿ ಅವರನ್ನು ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.

ಈ ಹಿನ್ನೆಲೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿಯೂ ಅಧಿಕಾರ ಗದ್ದುಗೆಗೇರುವ ನಿಟ್ಟಿನಲ್ಲಿ ಪಕ್ಷವನ್ನು ಬೂತ್‌ ಹಂತದಲ್ಲಿ ಸಂಘಟಿಸಲು ಟಿಎಂಸಿ ಅಧಿನಾಯಕಿಯೂ ಆಗಿರುವ ಬ್ಯಾನರ್ಜಿ ಅವರು ‘ದೀದಿ ಕೇ ಬೋಲೋ’(ನಿಮ್ಮ ಸೋದರಿಗೆ ಹೇಳಿ) ಎಂಬ ಹೊಸ ಆಂದೋಲನಕ್ಕೆ ಮುಂದಾಗಿದ್ದಾರೆ. ಇದು ಜನಸಾಮಾನ್ಯರು ತಮ್ಮ ಯಾವುದೇ ಸಮಸ್ಯೆಗಳನ್ನು ನೇರವಾಗಿ ಸಿಎಂ ಬ್ಯಾನರ್ಜಿ ಅವರ ಗಮನಕ್ಕೆ ತಂದು, ಪರಿಹರಿಸಿಕೊಳ್ಳಲು ನೆರವಾಗಲಿದೆ.

ಈ ಕ್ಯಾಂಪೇನ್‌ ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ ಅವರ ಪರಿಕಲ್ಪನೆಯಾಗಿದ್ದು, ಇದು ಮೊದಲ ಹಂತದಲ್ಲಿ ರಾಜ್ಯದ 1000 ಕಡೆಗಳಲ್ಲಿ 100 ದಿನಗಳ ಕಾಲ ನಡೆಯಲಿದೆ.

ದೀದಿ ಕೇ ಬೋಲೋ ಆಂದೋಲನದಡಿ ದಾಖಲಾಗುವ ದೂರುಗಳಿಗೆ ಸಿಎಂ ಬ್ಯಾನರ್ಜಿ ಅವರು, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಸೇರಿದಂತೆ ಇನ್ನಿತರ ಸಾಮಾಜಿಕ ಮಾಧ್ಯಮಗಳ ಮೂಲಕ ನೇರವಾಗಿ ಸ್ಪಂದಿಸುತ್ತಾರೆ.

ಇತ್ತೀಚೆಗಷ್ಟೇ ನಡೆದ ಟಿಎಂಸಿ ಹುತಾತ್ಮರ ದಿನ ರಾರ‍ಯಲಿಯನ್ನುದ್ದೇಶಿಸಿ ಮಾತನಾಡಿದ್ದ ಬ್ಯಾನರ್ಜಿ ಅವರು, ನಾವು ನಮ್ಮ ಬೂತ್‌ ಅನ್ನು ಗಟ್ಟಿಗೊಳಿಸಿಕೊಳ್ಳಬೇಕು. ಗ್ರಾಮಸ್ಥರ ಸಲುವಾಗಿ ನಾವು ಶ್ರದ್ಧೆಯಿಂದ ದುಡಿಯಬೇಕು. ಅಲ್ಲದೆ, ನಮ್ಮ ಪಕ್ಷದ ಕಾರ್ಯಕರ್ತರು ಮನೆ-ಮನೆ ಭೇಟಿಯನ್ನು ತೀವ್ರಗೊಳಿಸಬೇಕು. ಬಿಜೆಪಿಯ ವಿಭಜನೆ ರಾಜಕೀಯ ವಿರುದ್ಧ ನಾವು ಹೋರಾಟ ಮಾಡಲೇಬೇಕು ಎಂದು ಪ್ರತಿಪಾದಿಸಿದ್ದರು.