ಕೋಲ್ಕತಾ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಜಯ ಅತ್ತ ಕಾಂಗ್ರೆಸ್‌ ನಾಯಕತ್ವದಲ್ಲಿ ಕಂಪನ ಮೂಡಿಸಿದ್ದರೆ, ಇತ್ತ ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿಯಲ್ಲೂ ಭಾರೀ ತಲ್ಲಣಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಪಕ್ಷದ ಅವಮಾನಕಾರ ಸೋಲಿಗೆ ಹೊಣೆ ಹೊತ್ತು, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೇ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಚುನಾವಣೆ ಫಲಿತಾಂಶದ ಬಳಿಕ ನಡೆಸಲಾದ ಪಕ್ಷದ ಮೊದಲ ಸಭೆಯಲ್ಲಿ ಮಮತಾ ಬ್ಯಾನರ್ಜಿ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದರು. ‘ಪಕ್ಷದ ಆಂತರಿಕ ಸಭೆಯಲ್ಲಿ ರಾಜೀನಾಮೆ ನೀಡುವುದಾಗಿ ಹೇಳಿದೆ. ನನಗೆ ಕುರ್ಚಿ ಮುಖ್ಯವಲ್ಲ. ನಾನು ರಾಜೀನಾಮೆ ನೀಡಲು ಬಯಸಿದ್ದೆ. ಈ ಹಿಂದೆಯೂ ನಾನು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ನಾನು ನನ್ನ ಪಕ್ಷದ ಮುಖಂಡರನ್ನು ಒಪ್ಪಿಸಲು ಯತ್ನಿಸಿದೆ. ಆದರೆ, ಅವರು ಒಪ್ಪಿಕೊಳ್ಳಲಿಲ್ಲ. ಕುರ್ಚಿಗೆ ನನ್ನ ಅಗತ್ಯವಿದೆ. ನನಗೆ ಕುರ್ಚಿಯ ಅಗತ್ಯವಿಲ್ಲ. ಚುನಾವಣಾ ಆಯೋಗದ ಕಾರಣದಿಂದಾಗಿ ನಾನು ಕಳೆದ ಆರು ತಿಂಗಳಿನಿಂದ ಯಾವುದೇ ಅಧಿಕಾರ ಇಲ್ಲದ ಮುಖ್ಯಮಂತ್ರಿ ಆಗಿದ್ದೆ’ ಎಂದು ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇದೇ ವೇಳೆ ಬಿಜೆಪಿ ವಿರುದ್ಧವೂ ಹರಿಹಾಯ್ದ ಮಮತಾ, ಈ ಚುನಾವಣೆಯಲ್ಲಿ ಕೇಂದ್ರೀಯ ಪಡೆಗಳು ನಮ್ಮ ವಿರುದ್ಧ ಕೆಲಸ ಮಾಡಿದವು. ಕೋಮುವಾದಿ ಅಜೆಂಡಾದಲ್ಲಿ ಬಿಜೆಪಿ ಜಯಿಸಿತು. ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕೆಲಸ ಮಾಡಿತು. ಬಿಜೆಪಿ ಧಾರ್ಮಿಕ ಧ್ರುವೀಕರಣದಲ್ಲಿ ತೊಡಗಿಕೊಂಡಿದೆ ಎಂದ ಆರೋಪಿಸಿದರು.

ವಿದೇಶಿ ಶಕ್ತಿಗಳು: ಬಿಜೆಪಿಯ ದಿಗ್ವಿಜಯ ಸಂಶಯಾತೀತ ಅಲ್ಲ. ಹಲವು ರಾಜ್ಯಗಳಲ್ಲಿ ಪ್ರತಿಪಕ್ಷಗಳು ನಾಮಾವಶೇಷ ಆಗಿದ್ದು ಹೇಗೆಂಬುದು ಅಚ್ಚರಿ. ಏನೋ ಸೆಟ್ಟಿಂಗ್‌ ಆಗಿದೆ. ವಿದೇಶಿ ಶಕ್ತಿಗಳು ಕೆಲಸ ಮಾಡಿರಬಹುದು ಎಂದು ಮಮತಾ ಅನುಮಾನ ವ್ಯಕ್ತಪಡಿಸಿದರು.

ಕಳೆದ ಬಾರಿ ರಾಜ್ಯದ 42 ಸ್ಥಾನಗಳ ಪೈಕಿ 2 ರಲ್ಲಿ ಜಯ ಸಾಧಿಸಿದ್ದ ಬಿಜೆಪಿ ಈ ಬಾರಿ 18 ಸ್ಥಾನ ಗೆದ್ದುಕೊಂಡಿದೆ. ಇನ್ನು ಕಳೆದ ಬಾರಿ 32 ಸ್ಥಾನ ಗೆದ್ದಿದ್ದ ಟಿಎಂಸಿ ಈ ಬಾರಿ 22 ಸ್ಥಾನಕ್ಕೆ ಕುಸಿದಿದೆ.

ಪಕ್ಷದ ಆಂತರಿಕ ಸಭೆಯಲ್ಲಿ ರಾಜೀನಾಮೆ ನೀಡುವುದಾಗಿ ಹೇಳಿದೆ. ನನಗೆ ಕುರ್ಚಿ ಮುಖ್ಯವಲ್ಲ. ನಾನು ರಾಜೀನಾಮೆ ನೀಡಲು ಬಯಸಿದ್ದೆ. ಈ ಹಿಂದೆಯೂ ನಾನು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ನಾನು ನನ್ನ ಪಕ್ಷದ ಮುಖಂಡರನ್ನು ಒಪ್ಪಿಸಲು ಯತ್ನಿಸಿದೆ. ಆದರೆ, ಅವರು ಒಪ್ಪಿಕೊಳ್ಳಲಿಲ್ಲ.

- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ