ಕೋಲ್ಕತಾ[ಮೇ.27]: 2014ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಕೇವಲ 2 ಸ್ಥಾನಗಳಿಗೆ ಸೀಮಿತವಾಗಿದ್ದ ಬಿಜೆಪಿ ಈ ಬಾರಿ 18 ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸಿದ್ದಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಕ್ಷರಶಃ ಥಂಡ ಹೊಡೆದಿದ್ದಾರೆ. ಇದೇ ಕಾರಣಕ್ಕಾಗಿ ಪಕ್ಷದಲ್ಲಿ ತಮ್ಮ ನಂತರದ ಸ್ಥಾನವನ್ನು ಹೊಂದಿದ್ದ ತಮ್ಮ ಸೋದರ ಸಂಬಂಧಿ ಅಭಿಷೇಕ್‌ ಬ್ಯಾನರ್ಜಿ ಅವರ ಅಧಿಕಾರಕ್ಕೆ ಬ್ಯಾನರ್ಜಿ ಅವರು ಕತ್ತರಿ ಹಾಕಿದ್ದಾರೆ. ಅಲ್ಲದೆ, ಪಕ್ಷ ಸಂಘಟನೆ ನಿಟ್ಟಿನಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದ್ದಾರೆ.

ಜೊತೆಗೆ, ಅಭಿಷೇಕ್‌ ಉಸ್ತುವಾರಿ ವಹಿಸಿಕೊಂಡಿದ್ದ 9 ಕ್ಷೇತ್ರಗಳಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದ್ದು, ಈ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿಯನ್ನು ಇತರ ನಾಯಕರಿಗೆ ಹಂಚಲಾಗಿದೆ.

ಭಾನುವಾರ ಪಕ್ಷದ ಅಭ್ಯರ್ಥಿಗಳು ಹಾಗೂ ಹಿರಿಯ ನಾಯಕರ ಸಮ್ಮುಖದಲ್ಲಿ ನಡೆದ 1 ಗಂಟೆ ಸಭೆ ಬಳಿಕ ಮಾತನಾಡಿದ ಬ್ಯಾನರ್ಜಿ ಅವರು, ‘ಪಕ್ಷದ ಸಂಘಟನೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ತಮ್ಮ ಎದುರಾಳಿಗಳ ವಿರುದ್ಧ ಉತ್ತಮ ಪೈಪೋಟಿ ನೀಡಿ ಸೋಲುಂಡ ಅಭ್ಯರ್ಥಿಗಳಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ’ ಎಂದಿದ್ದಾರೆ.