ಮಲ್ಪೆ :  ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಸಾಯಿ ಸಿದ್ಧಿ ಎಂಬ ಬೋಟ್‌ ಮಂಗಳವಾರ ಗೋವಾ ರಾಜ್ಯದ ಮಾಲ್ವಾನ್‌ ಎಂಬಲ್ಲಿ ಮುಳುಗಿದ್ದು, ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ಮಲ್ಪೆಯ ಇತರ ಬೋಟ್‌ನ ಮೀನುಗಾರರು ರಕ್ಷಿಸಿದ್ದಾರೆ. 

ಮಲ್ಪೆಯ ರೋಶನಿ ಕುಂದರ್‌ ಎಂಬವರ ಮಾಲೀಕತ್ವದ ಈ ಸ್ಟೀಲ್‌ ಬೋಟ್‌ ಏ.16ರಂದು ಮೀನುಗಾರಿಕೆಗೆ ತೆರಳಿತ್ತು. ಮಾಲ್ಪಾನ್‌ನಲ್ಲಿ ಸುಮಾರು 40 ಮೀಟರ್‌ ಅಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬೋಟ್‌ನ ತಳಭಾಗ ಕಲ್ಲಿನಂತಹ ಗಟ್ಟಿವಸ್ತುವಿಗೆ ಡಿಕ್ಕಿ ಹೊಡೆಯಿತು. ಇದರಿಂದ ಬೋಟ್‌ನ ತಳಭಾಗ ಒಡೆದು ನೀರು ಒಳಗೆ ನುಗ್ಗಿತು. ಬೋಟು ಮುಳುಗುವ ಮುನ್ಸೂಚನೆ ಪಡೆದ ಮೀನುಗಾರರು ಅನತಿ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವಾಯುಪುತ್ರ ಮತ್ತು ಶುಭಾಶಯ ಎಂಬ ಬೋಟುಗಳಿಗೆ ಕರೆ ಮಾಡಿ ತಿಳಿಸಿದರು. ತಕ್ಷಣ ಅವರು ಮುಳುಗುತ್ತಿದ್ದ ಬೋಟಿನಲ್ಲಿದ್ದವರನ್ನು ರಕ್ಷಿಸಿದರು.

ದೋಣಿಯಲ್ಲಿ ಹಿಡಿದ ಮೀನು, 8 ಸಾವಿರ ಲೀಟರ್‌ ಡೀಸೆಲ್, ಲಕ್ಷಾಂತರ ರುಪಾಯಿ ಬೆಲೆ ಬಾಳುವ ಬಲೆ ಇತ್ಯಾದಿ ಸೇರಿ 80 ಲಕ್ಷ ರು.ಗೂ ಅಧಿಕ ನಷ್ಟವಾಗಿದೆ ಎಂದು ಬೋಟ್‌ನ ಮಾಲೀಕರು ತಿಳಿಸಿದ್ದಾರೆ.