ಬೆಂಗಳೂರು (ಜ. 29):  ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿ, ನಿಗೂಢ ರೀತಿಯಲ್ಲಿ ಕಾಣೆಯಾಗಿದ್ದ 7 ಮಂದಿ ಮೀನುಗಾರರ ಬೋಟ್‌ ಶ್ರೀಲಂಕಾದಲ್ಲಿ ಪತ್ತೆಯಾಗಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

7 ಜನ ಮೀನುಗಾರರ ಫೋಟೋ ಜೊತೆ ‘ಕಣ್ಮರೆಯಾಗಿದ್ದ ಮೀನುಗಾರರೆಲ್ಲರೂ ಸೇಫ್‌. ಮಾತು ಉಳಿಸಿ ನಡೆಸಿಕೊಟ್ಟಕಾರ್ಣಿಕದ ದೈವ ಬೊಬ್ಬರ್ಯ. ಮಲ್ಪೆಯ ಕಡಲಲ್ಲಿ ಕಾಣೆಯಾದ ಮೀನುಗಾರರು ಶ್ರೀಲಂಕಾದಲ್ಲಿ ಪತ್ತೆ ಎಲ್ಲರೂ ಸುರಕ್ಷಿತರಾಗಿದ್ದಾರೆ’ ಎಂಬ ಒಕ್ಕಣೆ ಬರೆದು ಪೋಸ್ಟ್‌ ಮಾಡಲಾಗುತ್ತಿದೆ. ದೈವಶಕ್ತಿ ಮೀನುಗಾರರನ್ನು ಹುಡುಕಿಕೊಟ್ಟಿದೆ ಎಂಬ ಹ್ಯಾಶ್‌ಟ್ಯಾಗ್‌ ಮೂಲಕ ಈ ಸಂದೇಶವನ್ನು ಶೇರ್‌ ಮಾಡಲಾಗುತ್ತಿದೆ. ಜನರೂ ಸಹ ಈ ಸಂದೇಶವನ್ನು ಕಣ್ಣುಮುಚ್ಚಿ ಪಾರ್ವರ್ಡ್‌ ಮಾಡುತ್ತಿದ್ದಾರೆ.

ಆದರೆ ಈ ಸುದ್ದಿಯ ಸತ್ಯಾಸತ್ಯ ಏನು ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ, ಕಾಣೆಯಾದ ಮೀನುಗಾರರು ಇದುವರೆಗೂ ಪತ್ತೆಯಾಗಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ತನಿಖೆಯ ದಾರಿ ತಪ್ಪಿಸುವಂತಹ ಸುದ್ದಿಗಳನ್ನು ಹರಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಡಿ.15ರಂದು ದಾಮೋದರ, ಹರೀಶ್‌, ಸತೀಶ್‌, ರಮೇಶ್‌, ರವಿ, ಲಕ್ಷ್ಮಣ್‌ ಮತ್ತು ಚಂದ್ರಶೇಖರ ಎಂಬ 7 ಜನ ಮೀನುಗಾರರು ಮಹಾರಾಷ್ಟ್ರ ಸಮುದ್ರ ತೀರದಲ್ಲಿ ಸುವರ್ಣ ತ್ರಿಭುಜ ಬೋಟು ಸಮೇತ ಕಾಣೆಯಾಗಿದ್ದು, ಈ ಬಗ್ಗೆ ಭಾರತೀಯ ನೌಕಾಸೇನೆ ಜವಾಬ್ದಾರಿ ತೆಗೆದುಕೊಂಡು ಶೋಧ ನಡೆಸುತ್ತಿದೆ. ಆದಾಗ್ಯೂ ಇದುವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಈ ನಡುವೆ ತನಿಖೆ ಹಾದಿ ತಪ್ಪಿಸುವಂತಹ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ.

-ವೈರಲ್ ಚೆಕ್