ಮಲ್ಪೆ ಬಂದರಿನಿಂದ ಡಿ.13ರಂದು 7 ಮಂದಿ ಮೀನುಗಾರರು ಸುವರ್ಣ ತ್ರಿಭುಜ ಎಂಬ ಬೋಟನ್ನೇರಿ ಅರಬ್ಬಿ ಸಮುದ್ರದಲ್ಲಿ ಗೋವಾ- ಮಹಾರಾಷ್ಟ್ರ ಗಡಿ ಭಾಗದ ಸಿಂಧುದುರ್ಗದ ಕಡೆಗೆ ಹೋದವರು, ಡಿ.15ರಂದು ರಾತ್ರಿ 1 ಗಂಟೆಗೆ ಏಕಾಏಕಿ ಬೋಟು ಸಹಿತ ಕಾಣೆಯಾಗಿದ್ದಾರೆ. ಇದರ ಹಿಂದೆ ಪಾಕ್ ಉಗ್ರರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. 

ಉಡುಪಿ : ಪಾಕಿಸ್ತಾನದ ಉಗ್ರರ ಗುಂಪೊಂದು ‘ಸಮುಂದರಿ ಜಿಹಾದ್‌’ (ಸಮುದ್ರದ ಮೂಲಕ ದಾಳಿ) ನಡೆಸಲು ಸಿದ್ಧತೆಗಳನ್ನು ನಡೆಸಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಮೂರು ದಿನಗಳ ಹಿಂದೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್‌ ಅಹೀರ್‌ ಸಂಸತ್‌ನಲ್ಲಿಯೇ ಬಹಿರಂಗಪಡಿಸಿದ್ದರು. ಆದರೆ ಇಂತಹ ಪ್ರಯತ್ನವೊಂದು ರಾಜ್ಯ ಕರಾವಳಿಯಲ್ಲೇ ನಡೆದಿದೆಯೇ ಎಂಬ ಸಂಶಯ ಇದೀಗ ಉಡುಪಿಯ ಮಲ್ಪೆ ಬಂದರಿನಲ್ಲಿ ವ್ಯಕ್ತವಾಗಿದೆ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ಮಲ್ಪೆ ಬಂದರಿನಿಂದ ಡಿ.13ರಂದು 7 ಮಂದಿ ಮೀನುಗಾರರು ಸುವರ್ಣ ತ್ರಿಭುಜ ಎಂಬ ಬೋಟನ್ನೇರಿ ಅರಬ್ಬಿ ಸಮುದ್ರದಲ್ಲಿ ಗೋವಾ- ಮಹಾರಾಷ್ಟ್ರ ಗಡಿ ಭಾಗದ ಸಿಂಧುದುರ್ಗದ ಕಡೆಗೆ ಹೋದವರು, ಡಿ.15ರಂದು ರಾತ್ರಿ 1 ಗಂಟೆಗೆ ಏಕಾಏಕಿ ಬೋಟು ಸಹಿತ ಕಾಣೆಯಾಗಿದ್ದಾರೆ. ಎಲ್ಲರ ಮೊಬೈಲ್‌ ಮತ್ತು ಬೋಟ್‌ನ ವಯರ್‌ಲೆಸ್‌ ಸಂಪರ್ಕ ಕಡಿತವಾಗಿದೆ. 20 ದಿನ ಕಳೆದರೂ, ಕರಾವಳಿ ರಕ್ಷಣಾ ಪಡೆ, ನೌಕಾಪಡೆ, ವಾಯುಪಡೆಗಳೇ ಕಾರ್ಯಾಚರಣೆಗಿಳಿದಿದ್ದರೂ, ಕಾಣೆಯಾದ ಬೋಟ್‌, ಮೀನುಗಾರರ ಬಗ್ಗೆ ಯಾವ ಮಾಹಿತಿಯೂ ಸಿಕ್ಕಿಲ್ಲ.

ಸಂದೇಹ ಏಕೆ?:

-ಗೋವಾ ಅಥವಾ ಮಹಾರಾಷ್ಟ್ರ ಮೀನುಗಾರರು ತಮ್ಮ ವ್ಯಾಪ್ತಿಗೆ ಬಂದ ಕರ್ನಾಟಕ ಮೀನುಗಾರರನ್ನು ಎಳೆದೊಯ್ದಿದ್ದರೆ (ಇಂತಹ ಘಟನೆಗಳು ಹಿಂದೆ ನಡೆದಿವೆ) ಒಂದೆರಡು ದಿನದಲ್ಲಿ ಬಿಟ್ಟು ಬಿಡುತ್ತಾರೆ. ಅದಕ್ಕಿಂತ ಹೆಚ್ಚು ತೊಂದರೆ ಕೊಡುವಂತಹ ಕ್ರೂರಿಗಳು ಮೀನುಗಾರರಲ್ಲ.

-ತಾಂತ್ರಿಕ ವೈಫಲ್ಯದಿಂದ, ಹವಾಮಾನ ವೈಪರೀತ್ಯದಿಂದ ಬೋಟ್‌ ಮುಳುಗಿದ್ದರೆ ಅದರ ಅವಶೇಷಗಳು ಸಮುದ್ರದಲ್ಲಿ ಖಂಡಿತಾ ಸಿಗುತ್ತವೆ. ಬೋಟ್‌ನಲ್ಲಿದ್ದ ಸುಮಾರು 8 ಸಾವಿರ ಲೀಟರ್‌ ಡೀಸೆಲ್‌ ಸಮುದ್ರದ ಮೇಲೆ 2-3 ಕಿ.ಮೀ. ವಿಸ್ತೀರ್ಣಕ್ಕೆ ಹರಡಿಕೊಳ್ಳುತ್ತದೆ, 24 ಗಂಟೆಯೊಳಗೆ ಮೀನುಗಾರರ ಕಳೇಬರಗಳು ಪತ್ತೆಯಾಗುತ್ತವೆ.

-ಸೋಮಾಲಿಯಾದ ಕಡಲ್ಗಳ್ಳರು ಅರಬ್ಬಿ ಸಮುದ್ರದೊಳಗೆ ಬಂದು ದೋಚಿದ, ಬೋಟುಗಳನ್ನು ಅಪಹರಿಸಿದ ಉದಾಹರಣೆಗಳೂ ಇಲ್ಲ. ಅವರು ಬಳಸುವ ಸಣ್ಣ ಬೋಟುಗಳಲ್ಲಿ ಇಷ್ಟುದೂರ ಭಾರತದ ತೀರಕ್ಕೆ ಬರುವುದಕ್ಕೆ ಆಗುವುದೂ ಇಲ್ಲ.

ಮೇಲಿನ ಈ ಮೂರು ಕಾರಣಗಳು ಸಂಭವಿಸಿಲ್ಲ, ಆದ್ದರಿಂದ ಉಳಿದಿರುವ ಒಂದೇ ಸಾಧ್ಯತೆ ಎಂದರೆ ಭಾರತದ ಈ ಮೀನುಗಾರರನ್ನು ಅಪಹರಿಸಿರುವುದು ಎಂಬ ಸಂಶಯ ಮೀನುಗಾರರಲ್ಲಿ ಮೂಡಿರುವುದಕ್ಕೆ ಅಚ್ಚರಿ ಇಲ್ಲ. ಹಾಗಂತ ಇದುವರೆಗೆ ಪಕ್ಕಾ ಸಾಕ್ಷ್ಯಾಧಾರಗಳಿಲ್ಲ. ಕರಾವಳಿ ಕಾವಲು ಮತ್ತು ಜಿಲ್ಲೆಯ ಪೊಲೀಸರು ಯಾವುದೇ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ಆದರೆ ಸಂಶಯಗಳನ್ನು ತಳ್ಳಿ ಹಾಕುತ್ತಿಲ್ಲ.

ವರದಿ : ಸುಭಾಶ್ಚಂದ್ರ ಎಸ್‌. ವಾಗ್ಳೆ