Asianet Suvarna News Asianet Suvarna News

ತಿರುಪತಿ ತಿಮ್ಮಪ್ಪ'ಗೆ ‘ಮಲೆನಾಡು ಗಿಡ್ಡ ’ ಹಾಲು ಅಭಿಷೇಕ

ಕಳೆದ ತಿಂಗಳು ತಿರುಪತಿಗೆ ಭೇಟಿ ನೀಡಿದ್ದ ಶ್ರೀಗಳು ಮಲೆನಾಡ ಗಿಡ್ಡವನ್ನು ತಿರುಪತಿಗೆ ತಲುಪಿಸಿದ್ದಾರೆ. ತಿರುಮಲ- ತಿರುಪತಿ ದೇಗುಲ (ಟಿಟಿಡಿ) ಟ್ರಸ್ಟ್‌ನ ಅಂಗಸಂಸ್ಥೆ ಶ್ರೀ ವೆಂಕಟೇಶ್ವರ ಗೋಸಂರಕ್ಷಣಾ(ಶ್ರೀವಾರಿ) ಟ್ರಸ್ಟ್ನ ಆಶ್ರಯದಲ್ಲಿ ಈಗಾಗಲೇ ಹಲವು ಜಾತಿಯ ದೇಸಿ ಹಸುಗಳನ್ನು ಸಾಕಲಾಗುತ್ತಿದೆ. ಆದರೆ ಕರ್ನಾಟಕದ ಮಲೆನಾಡು ಗಿಡ್ಡ ತಳಿ ಹಸುಗಳಿರಲಿಲ್ಲ. ಅ.24ರಂದು ಹೊಸನಗರ ಮಠದಿಂದ ಮಲೆನಾಡು ಗಿಡ್ಡ ತಳಿಯ ಐದು ಹಸುವನ್ನು ಶ್ರೀ ವೆಂಕಟೇಶ್ವರ ಟ್ರಸ್ಟ್ಗೆ ನೀಡಲಾಗಿದೆ.

Malnad cow for Tirupati Timmappas Abisheka

ದೇಶದ ಅತ್ಯಂತ ಶ್ರೀಮಂತ ದೇವಸ್ಥಾನವಾದ ತಿರುಮಲ- ತಿರುಪತಿಗೂ ಕರುನಾಡಿನ ಕ್ಷೀರ ಸಂಪತ್ತಿಗೂ ಅವಿನಾಭಾವ ಸಂಬಂಧ. ಈ ಹಿಂದೆ ತಿರುಪತಿ ಲಡ್ಡು ತಯಾರಿಯಲ್ಲಿ ಕೆಎಂಎಫ್‌ನ ನಂದಿನಿ ತುಪ್ಪ ಬಳಸಲಾಗುತ್ತಿತ್ತು. ಇದೀಗ ತಿರುಪತಿ ತಿಮ್ಮಪ್ಪನ ಕ್ಷೀರಾಭಿಷೇಕಕ್ಕೆ ಕರ್ನಾಟಕದ ವಿಶಿಷ್ಟ ದೇಸಿ ತಳಿ ಮಲೆನಾಡು ಗಿಡ್ಡ ಹಸುವಿನ ಹಾಲೂ ಸಮರ್ಪಿತಗೊಳ್ಳುತ್ತಿದೆ.

ಇದು ಸಾಧ್ಯವಾಗಿದ್ದು ಹೊಸನಗರದ ಶ್ರೀ ರಾಘವೇಶ್ವರ ಸ್ವಾಮೀಜಿ ಅವರಿಂದ. ಕಳೆದ ತಿಂಗಳು ತಿರುಪತಿಗೆ ಭೇಟಿ ನೀಡಿದ್ದ ಶ್ರೀಗಳು ಮಲೆನಾಡ ಗಿಡ್ಡವನ್ನು ತಿರುಪತಿಗೆ ತಲುಪಿಸಿದ್ದಾರೆ. ತಿರುಮಲ- ತಿರುಪತಿ ದೇಗುಲ (ಟಿಟಿಡಿ) ಟ್ರಸ್ಟ್ನ ಅಂಗಸಂಸ್ಥೆ ಶ್ರೀ ವೆಂಕಟೇಶ್ವರ ಗೋಸಂರಕ್ಷಣಾ(ಶ್ರೀವಾರಿ) ಟ್ರಸ್ಟ್ನ ಆಶ್ರಯದಲ್ಲಿ ಈಗಾಗಲೇ ಹಲವು ಜಾತಿಯ ದೇಸಿ ಹಸುಗಳನ್ನು ಸಾಕಲಾಗುತ್ತಿದೆ. ಆದರೆ ಕರ್ನಾಟಕದ ಮಲೆನಾಡು ಗಿಡ್ಡ ತಳಿ ಹಸುಗಳಿರಲಿಲ್ಲ. ಅ.24ರಂದು ಹೊಸನಗರ ಮಠದಿಂದ ಮಲೆನಾಡು ಗಿಡ್ಡ ತಳಿಯ ಐದು ಹಸುವನ್ನು ಶ್ರೀ ವೆಂಕಟೇಶ್ವರ ಟ್ರಸ್ಟ್ಗೆ ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ತಿರುಪತಿಯಿಂದ ಐದು ಓಂಗೋಲ್ ತಳಿಯ ಹಸುಗಳನ್ನು ಶ್ರೀ ಮಠಕ್ಕೆ ವಿನಿಮಯ ಮಾಡಿಕೊಳ್ಳಲಾಗಿದೆ. ತಿರುಪತಿ ತಿಮ್ಮಪ್ಪನಿಗೆ ಕ್ಷೀರಾಭಿಷೇಕಕ್ಕೆ ದಿನಕ್ಕೆ ಸುಮಾರು 100 ರಿಂದ 150 ಲೀಟರ್ ಹಾಲು ಬೇಕಾಗುತ್ತದೆ. ಮೊದಲು ಅಲ್ಲಿ ಜೆರ್ಸಿ ದನಗಳ ಹಾಲನ್ನೂ ಬಳಸುತ್ತಿದ್ದರು. ಕೆಲ ವರ್ಷ'ಗಳಿಂದ ದೇಸಿ ಹಸುವಿನ ಹಾಲನ್ನೇ ಬಳಸಲಾಗುತ್ತಿದೆ. ಈಗ ನಮ್ಮ ಮಲೆನಾಡು ಗಿಡ್ಡದ ಹಾಲೂ ಇತರೆ ದೇಸಿ ತಳಿಯ ಹಸುವಿನ ಹಾಲಿನ ಜತೆಗೆ ತಿರುಪತಿ ತಿಮ್ಮಪ್ಪನ ಅಭಿಷೇಕಕ್ಕೆ ಅರ್ಪಿತವಾಗುತ್ತಿದೆ. ಅಂದ ಹಾಗೆ ಶ್ರೀ ವೆಂಕಟೇಶ್ವರ ಟ್ರಸ್ಟ್ನಿಂದ ಸಹಸ್ರಾರು ಗೋವುಗಳನ್ನು ಸಾಕಲಾಗುತ್ತಿದೆ.

ರಾಜ್ಯದಲ್ಲಿವೆ 12 ಲಕ್ಷ ಗಿಡ್ಡ ಹಸು

ಇದು ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನ ವಿಶಿಷ್ಟ ತಳಿ. ಆಕಾರದಲ್ಲಿ ಚಿಕ್ಕದಾಗಿರುವ ಈ ತಳಿಯ ಹಸುಗಳನ್ನು ಸಾಕುವುದು ಸುಲಭ. ಇದರ ಹಾಲು ಮತ್ತು ಮೂತ್ರದಲ್ಲಿ ಲೆಕ್ಟೋಫೆರಿನ್ ಅಂಶ ಅಧಿಕವಾಗಿದೆ. ಅದು ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಈ ದೇಸಿ ತಳಿಯ ಹಾಲು, ಗೋಮೂತ್ರ ಮತ್ತು ತುಪ್ಪಕ್ಕೆ ಹೆಚ್ಚಿನ ಬೇಡಿಕೆಯಿದೆ. ಇಂದಿನ ದಿನಗಳಲ್ಲಿ ಹೆಚ್ಚು ಬೇಡಿಕೆಯಿರುವ ‘ಎ2 ಹಾಲಿನ’ ವಿಷಯಕ್ಕೆ ಬಂದಾಗಲೂ ಮಲೆನಾಡು ಗಿಡ್ಡದ ತಳಿ ಹಸುಗಳ ಕೊಡುಗೆ ಗಮನಾರ್ಹ.

ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ ಮತ್ತು ಕೊಡಗು ಜಿಲ್ಲೆಗಳು ಈ ಮಲೆನಾಡ ಗಿಡ್ಡ ತಳಿಯ ತವರು. ಈಗೀಗ ಮತ್ತೆ ಕೆಲವು ಜಿಲ್ಲೆಗಳಲ್ಲೂ ಸಾಕುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 12 ಲಕ್ಷ ಮಲೆನಾಡು ಗಿಡ್ಡ ಹಸುಗಳಿವೆ ಎಂದು ರಾಜ್ಯ ಸರ್ಕಾರ 2013 ರಲ್ಲಿ ನಡೆಸಿದ ಜಾನುವಾರು ಗಣತಿ ತಿಳಿಸಿದೆ. ಪ್ರಥಮ ಸ್ಥಾನದಲ್ಲಿ ಹಳ್ಳಿಕಾರ್ ತಳಿ ಇದ್ದು, ರಾಜ್ಯದಲ್ಲಿ 16 ಲಕ್ಷ ಹಸುಗಳಿವೆ. ನ್ಯಾಷನಲ್ ಬ್ಯೂರೊ ಆಫ್ ಎನಿಮಲ್ ಜೆನೆಟಿಕ್ ರಿಸೋರ್ಸಸ್ ನೀಡುವ ಪಟ್ಟಿಯಲ್ಲಿ ಮಲೆನಾಡ ಗಿಡ್ಡ ತಳಿ ಸೇರ್ಪಡೆಗೊಂಡಿದೆ.

- ರಾಘವೇಂದ್ರ ಅಗ್ನಿಹೋತ್ರಿ, ಮಂಗಳೂರು, ಕನ್ನಡಪ್ರಭ

Follow Us:
Download App:
  • android
  • ios