ಬೆಂಗಳೂರು : ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಿರುವ ಸಂಕಷ್ಟವನ್ನು ನಿವಾರಿಸಲು ರಣತಂತ್ರ ಹೆಣೆಯುತ್ತಿರುವ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳ ನಾಯಕರು ಅತೃಪ್ತ ಶಾಸಕರನ್ನು ಸಮಾಧಾನಪಡಿಸಲು ಸಂಪುಟ ವಿಸ್ತರಣೆ ಮಾಡಬೇಕೋ ಅಥವಾ ಸಂಪುಟ ಪುನಾರಚನೆಯನ್ನೇ ಕೈಗೆತ್ತಿಕೊಳ್ಳಬೇಕೋ ಎಂಬ ಜಿಜ್ಞಾಸೆಯಲ್ಲಿದ್ದಾರೆ.

ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಸ್ಪಷ್ಟಚಿತ್ರಣ ಹೊರಬೀಳುವ ನಿರೀಕ್ಷೆಯಿದ್ದು, ಒಂದು ವಾರದೊಳಗಾಗಿ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಾರಚನೆ ಪೈಕಿ ಒಂದನ್ನು ಮಾಡಲು ಉಭಯ ಪಕ್ಷಗಳ ನಾಯಕರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಕೇವಲ ಸಂಪುಟ ವಿಸ್ತರಣೆಯಾದರೆ ಈಗಿರುವ ಸಚಿವರ ಕುರ್ಚಿ ಅಲುಗಾಡುವುದಿಲ್ಲ. ಒಂದು ವೇಳೆ ಪುನಾರಚನೆಯ ನಿರ್ಧಾರ ಕೈಗೊಂಡಲ್ಲಿ ಹಲವು ಸಚಿವರು ತಮ್ಮ ಅಧಿಕಾರವನ್ನು ತ್ಯಾಗ ಮಾಡಬೇಕಾಗಿ ಬರುತ್ತದೆ. ಕಾಂಗ್ರೆಸ್‌ನಿಂದ ನಾಲ್ಕೈದು ಮಂದಿ ಹಾಗೂ ಜೆಡಿಎಸ್‌ನಿಂದ ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಡುವ ಸಂದರ್ಭ ನಿರ್ಮಾಣವಾಗಬಹುದು ಎನ್ನಲಾಗುತ್ತಿದೆ.

ಇದನ್ನು ಹೊರತುಪಡಿಸಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಬ್ಬರನ್ನು ಬಿಟ್ಟು ಇನ್ನುಳಿದ ಎಲ್ಲ ಸಚಿವರ ರಾಜೀನಾಮೆ ಪಡೆದು ಹೊಸದಾಗಿ ಸಂಪುಟ ರಚನೆ ಮಾಡುವ ಪ್ರಸ್ತಾವನೆಯೂ ಉಭಯ ಪಕ್ಷಗಳ ನಾಯಕರ ಮುಂದಿದೆ. ಆ ಬಗ್ಗೆ ಇನ್ನೂ ಅಂತಿಮ ಹಂತದ ಚಿತ್ರಣ ರೂಪುಗೊಂಡಿಲ್ಲ.

ಒಟ್ಟಾರೆ ಅತೃಪ್ತ ಶಾಸಕರನ್ನು ಸ್ಥಾನಮಾನಗಳ ಮೂಲಕ ಮನವೊಲಿಸುವ ಸಂಬಂಧ ಉಭಯ ಪಕ್ಷಗಳ ಅದರಲ್ಲೂ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ಸಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿದ ನಂತರವೇ ಸ್ಪಷ್ಟತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಕೆಲವು ಅತೃಪ್ತ ಶಾಸಕರು ಬಿಜೆಪಿಗೆ ವಲಸೆ ಹೋಗಬಹುದು ಎಂಬ ವದಂತಿಗಳು ದಟ್ಟವಾಗಿವೆ. ಹೀಗಾಗಿ, ಅಷ್ಟರೊಳಗಾಗಿ ತಮ್ಮ ಸರ್ಕಾರದ ಬುಡ ಗಟ್ಟಿಮಾಡಿಕೊಳ್ಳಬೇಕು ಎಂಬ ನಿಲುವಿಗೆ ಬಂದಿರುವ ಉಭಯ ಪಕ್ಷಗಳ ನಾಯಕರು ಎಲ್ಲಿಲ್ಲದ ಕಸರತ್ತು ಆರಂಭಿಸಿದ್ದಾರೆ.

ಅತೃಪ್ತ ಶಾಸಕರು ಬಿಜೆಪಿಗೆ ವಲಸೆ ಹೋಗದಂತೆ ತಡೆಗಟ್ಟಬೇಕು ಎಂಬ ನಿಲುವಿಗೆ ಬಂದಿರುವ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರಿಗೆ, ಅದರಲ್ಲೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರಿಗೆ ಈಗ ಖಾಲಿ ಇರುವ ಮೂರು ಸಚಿವ ಸ್ಥಾನಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳುವ ಬದಲು ಪುನಾರಚನೆ ಬಗ್ಗೆಯೇ ಒಲವಿದೆ. ಅಂದರೆ, ಎರಡೂ ಪಕ್ಷಗಳಿಂದ ಕೆಲವು ಸಚಿವರನ್ನು ಸಂಪುಟದಿಂದ ಕೈಬಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಅವರನ್ನು ಕಟ್ಟಿಹಾಕುವ ಉದ್ದೇಶ ಹೊಂದಿದ್ದಾರೆ.

ಆದರೆ, ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಚಿವ ಸಂಪುಟ ವಿಸ್ತರಣೆ ಕೈಗೊಂಡರಷ್ಟೇ ಸಾಕು ಎಂಬ ಅಭಿಪ್ರಾಯ ಹೊಂದಿದ್ದಾರೆ. ಬಿಜೆಪಿಯು ಸರ್ಕಾರ ರಚನೆಗಿಂತ ಮಧ್ಯಂತರ ಚುನಾವಣೆ ಎದುರಿಸುವತ್ತಲೇ ಹೆಚ್ಚಿನ ಆಸಕ್ತಿ ಹೊಂದಿದೆ. ಹೀಗಿರುವಾಗ ನಮ್ಮ ಆಡಳಿತಾರೂಢ ಪಕ್ಷಗಳ ಶಾಸಕರು ಬಿಜೆಪಿಗೆ ವಲಸೆ ಹೋಗುವುದಿಲ್ಲ. ಮೇಲಾಗಿ, ಸಂಪುಟ ಪುನಾರಚನೆಯಿಂದ ಅನಗತ್ಯ ಗೊಂದಲ ಸೃಷ್ಟಿಯಾಗಬಹುದು ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು, ಅತೃಪ್ತ ಶಾಸಕರು ವಲಸೆ ಹೋಗುವ ಆತಂಕವನ್ನು ಶಾಶ್ವತವಾಗಿ ನಿವಾರಿಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ. ಪದೇ ಪದೇ ಈ ಆತಂಕ ಉದ್ಭವಿಸುವುದನ್ನು ತಡೆಗಟ್ಟಬೇಕು ಎಂಬುದು ಅವರ ಆಶಯ.

ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳು ನಡೆಸುತ್ತಿರುವ ಈ ಕಸರತ್ತು ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತದೆ, ಅತೃಪ್ತ ಶಾಸಕರು ಸ್ಥಾನಮಾನ ಪಡೆದುಕೊಂಡು ಸುಮ್ಮನಾಗುತ್ತಾರಾ ಎಂಬುದು ಕುತೂಹಲಕರವಾಗಿದೆ.

ಜೆಡಿಎಸ್‌ನಲ್ಲಿ ಚಿಂತನೆ

1. ಲೋಕಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಜೆಡಿಎಸ್‌ಗೆ ಈಗ ಇರುವ ರಾಜ್ಯ ಸರ್ಕಾರವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವುದು ಕಾಂಗ್ರೆಸ್‌ಗಿಂತ ಹೆಚ್ಚು ಅನಿವಾರ್ಯ. ಹಾಲಿ ಸರ್ಕಾರ ಪತನಗೊಂಡಲ್ಲಿ ಕಾಂಗ್ರೆಸ್‌ ಪ್ರಮುಖ ಪ್ರತಿಪಕ್ಷದ ಸ್ಥಾನದಲ್ಲಾದರೂ ಕುಳಿತುಕೊಳ್ಳಬಹುದು. ಆದರೆ, ಜೆಡಿಎಸ್‌ಗೆ ಆ ಭಾಗ್ಯವೂ ಸಿಗುವುದಿಲ್ಲ.

2. ಸದ್ಯಕ್ಕೆ ಜೆಡಿಎಸ್‌ ಕೋಟಾದಲ್ಲಿ ಎರಡು ಸಚಿವ ಸ್ಥಾನಗಳು ಖಾಲಿ ಉಳಿದಿವೆ. ಸಂಪುಟ ವಿಸ್ತರಣೆಯಾದರೆ ಅದರಲ್ಲಿ ಒಂದನ್ನು ಕಾಂಗ್ರೆಸ್ಸಿನ ಅತೃಪ್ತ ಶಾಸಕ ಅಥವಾ ಪಕ್ಷೇತರ ಶಾಸಕರಿಗೆ ಬಿಟ್ಟುಕೊಡಲು ಬಯಸಿದೆ. ಅಗತ್ಯ ಕಂಡುಬಂದಲ್ಲಿ ಎರಡೂ ಸ್ಥಾನಗಳನ್ನೂ ಬಿಟ್ಟುಕೊಡುವ ಸಾಧ್ಯತೆಯಿದೆ.

3. ಒಂದು ವೇಳೆ ಸಂಪುಟ ಪುನಾರಚನೆಯಾದಲ್ಲಿ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಅವರಿಂದ ರಾಜೀನಾಮೆ ಪಡೆಯುವ ನಿರೀಕ್ಷೆಯಿದೆ. ಆ ಎರಡೂ ಸ್ಥಾನಗಳನ್ನೂ ಕಾಂಗ್ರೆಸ್ಸಿನ ಅತೃಪ್ತ ಶಾಸಕರಿಗೆ ಬಿಟ್ಟುಕೊಡುವ ಮಟ್ಟಿಗೆ ಜೆಡಿಎಸ್‌ ಚಿಂತನೆ ಮಾಡುತ್ತಿದೆ.

4. ಸದ್ಯಕ್ಕೆ ಜೆಡಿಎಸ್‌ನಲ್ಲಿ ಅತೃಪ್ತ ಶಾಸಕರು ಬೆಳಕಿಗೆ ಬಂದಿಲ್ಲ. ಹಾಗೊಂದು ವೇಳೆ ಅಂಥವರು ಕಂಡುಬಂದಲ್ಲಿ ಅವರಿಗೂ ಸಚಿವ ಸ್ಥಾನ ನೀಡಲು ಪಕ್ಷದ ನಾಯಕರು ಪರಿಶೀಲನೆ ನಡೆಸುತ್ತಿದ್ದಾರೆ.

5. ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳುವ ಭಾಗವಾಗಿ ಮಿತ್ರ ಪಕ್ಷ ಕಾಂಗ್ರೆಸ್ಸಿನ ಶಾಸಕರ ಸ್ನೇಹ ಮತ್ತು ವಿಶ್ವಾಸ ಸಂಪಾದಿಸುವ ಪ್ರಯತ್ನವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಶೀಘ್ರದಲ್ಲೇ ಆರಂಭಿಸಲಿದ್ದಾರೆ. ಅವರ ಕ್ಷೇತ್ರಗಳಿಗೆ ಹೇರಳ ಅನುದಾನ, ಅವರು ಹೇಳುವ ಕೆಲಸಗಳಿಗೆ ಹಸಿರು ನಿಶಾನೆ ತೋರುವ ಸಂಭವವಿದೆ.

ಸಿದ್ದರಾಮಯ್ಯ ಚಿಂತನೆ

1. ಸಂಪುಟ ಪುನಾರಚನೆ ಮತ್ತಷ್ಟುಗೊಂದಲಗಳಿಗೆ ಕಾರಣವಾಗಬಹುದು. ಸಂಪುಟದಿಂದ ಹೊರಬಂದವರು ಬಂಡೇಳುವ ಸಾಧ್ಯತೆಗಳಿರುವ ಕಾರಣ ವಿಸ್ತರಣೆಯಷ್ಟೇ ಸಾಕು.

2. ಬಿಜೆಪಿ ಆಪರೇಷನ್‌ ಕಮಲ ಮಾಡುವ ಲಕ್ಷಣ ತೋರುತ್ತಿಲ್ಲ. ಬದಲಾಗಿ, ವಿಧಾನಸಭೆ ವಿಸರ್ಜನೆಯಾಗುವಂತಹ ರಾಜಕೀಯ ಬೆಳವಣಿಗೆ ನಡೆಯಲಿ ಎಂಬ ಬಯಕೆ ಹೊಂದಿದೆ. ಹೀಗಾಗಿ ಮೈತ್ರಿಕೂಟದ ಶಾಸಕರು ಬಿಜೆಪಿಯತ್ತ ಧಾವಿಸುವ ಪರಿಸ್ಥಿತಿ ಉದ್ಭವಿಸುವುದಿಲ್ಲ.

3. ಮೈತ್ರಿಕೂಟದ ಯಾವ ಶಾಸಕರಿಗೂ ವಿಧಾನಸಭೆ ವಿಸರ್ಜನೆಯಾಗಲಿ ಎಂಬ ಬಯಕೆಯಿಲ್ಲ. ಹೊಸ ಚುನಾವಣೆಯನ್ನು ಎದುರಿಸುವ ಮನಸ್ಥಿತಿಯೂ ಇಲ್ಲ. ಹೀಗಾಗಿ ವಿಸರ್ಜನೆ ಬಯಸುತ್ತಿರುವ ಬಿಜೆಪಿಗೆ ಶಾಸಕರು ವಲಸೆ ಹೋಗುವುದಿಲ್ಲ.

4. ಸರ್ಕಾರ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಜೆಡಿಎಸ್‌ ತನ್ನ ಪಾಲನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವ ಮನಸ್ಥಿತಿ ಹೊಂದಿದೆ. ಹೀಗಾಗಿ ಮೂರು ಸ್ಥಾನಗಳಿಗೆ ಕಾಂಗ್ರೆಸ್ಸಿಗರನ್ನೇ ತುಂಬಿಕೊಳ್ಳುವುದು ಉತ್ತಮ. ಹಾಲಿ ಸಚಿವರನ್ನು ಕೈಬಿಟ್ಟರೆ ಮತ್ತೆ ಬಂಡಾಯ ಸ್ಥಿತಿ ಎದುರಿಸಬೇಕಾಗಬಹುದು.

ಕಾಂಗ್ರೆಸ್‌ ಇತರರ ಚಿಂತನೆ

1. ಕಾಂಗ್ರೆಸ್‌ನಲ್ಲಿ ಅತೃಪ್ತರ ದೊಡ್ಡ ದಂಡಿದೆ. ಅಧಿಕಾರ ಮಾತ್ರ ಅವರನ್ನು ಸಮಾಧಾನಪಡಿಸಲು ಸಾಧ್ಯ. ಹೀಗಾಗಿ, ಸಂಪುಟ ಪುನಾರಚನೆಯೇ ಉತ್ತಮ.

2. ಪಕ್ಷನಿಷ್ಠರಾದ ಸಚಿವರನ್ನು ಮಾತ್ರ ಸಂಪುಟದಿಂದ ಕೈಬಿಡುವುದರಿಂದ ಯಾವುದೇ ಬಂಡಾಯ ಅಥವಾ ಗೊಂದಲವಾಗುವುದಿಲ್ಲ.

3. ಸಿದ್ದರಾಮಯ್ಯ ಅವಧಿಯಲ್ಲಿ ಐದು ವರ್ಷ ಪೂರೈಸಿದ ಹಿರಿಯ ಸಚಿವರು ಖಾತೆ ಬಿಟ್ಟುಕೊಡಲು ತಾವಾಗೇ ಸಿದ್ಧರಿದ್ದಾರೆ. ಇಂತಹ ಸಚಿವರ ರಾಜೀನಾಮೆ ಪಡೆದು ಅತೃಪ್ತರಿಗೆ ಅವಕಾಶ ನೀಡುವ ಮೂಲಕ ಬಿಜೆಪಿಯತ್ತ ಅತೃಪ್ತ ಶಾಸಕರು ಹೋಗದಂತೆ ತಡೆಯಬಹುದು.

4. ಬಿಜೆಪಿಯು ತೋರಿಕೆಗೆ ವಿಧಾನಸಭೆ ವಿಸರ್ಜನೆಯತ್ತ ಮುಖ ಮಾಡಿದಂತೆ ಸಂದೇಶ ರವಾನೆ ಮಾಡುತ್ತಿದ್ದರೂ ಒಳಗೊಳಗೆ ಮೈತ್ರಿಕೂಟದ 15 ಶಾಸಕರನ್ನು ಒಗ್ಗೂಡಿಸಲು ಯತ್ನಿಸುತ್ತಿರುವ ಸಾಧ್ಯತೆಯಿದೆ. ಹೀಗಾಗಿ ಸಂಪುಟ ಪುನಾರಚನೆಯೊಂದೇ ಶಾಸಕರನ್ನು ಬಿಜೆಪಿಯತ್ತ ಹೋಗದಂತೆ ತಡೆಯಲು ಸಾಧ್ಯ