Asianet Suvarna News Asianet Suvarna News

ಗಣೇಶ ಚೌತಿ ನಂತರ ಭಾರಿ ರಾಜಕೀಯ ಬದಲಾವಣೆ : ಸ್ಫೋಟಕ ಮಾಹಿತಿ

ಗಣೇಶ ಚತುರ್ಥಿ ಬಳಿಕ ಸೆಪ್ಟೆಂಬರ್‌ ತಿಂಗಳಲ್ಲೇ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆ ಆಗಲಿದೆ ಎಂದು ಕಾಂಗ್ರೆಸ್‌ ಮುಖಂಡ ಸಿ.ಎಂ. ಇಬ್ರಾಹಿಂ ಸ್ಫೋಟಕ ಹೇಳಿಕೆ ನೀಡಿದ್ದಾರೆ.

Major Change In Karnataka Politics After Ganesh Chaturthi
Author
Bengaluru, First Published Sep 1, 2018, 11:44 AM IST

ಬೆಂಗಳೂರು :  ಸಮ್ಮಿಶ್ರ ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಪ್ರಾಮುಖ್ಯತೆ ನೀಡಿಲ್ಲ. ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರೇ ಸರ್ಕಾರದಲ್ಲಿ ತುಂಬಿಕೊಂಡಿದ್ದಾರೆ. ಸರ್ಕಾರದಲ್ಲಿ ಅಲ್ಪಸಂಖ್ಯಾತ ಸಮುದಾಯ ಕೇವಲ ಉತ್ಸವ ಮೂರ್ತಿಯಂತಾಗಿದ್ದು, ಈ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿ ಬಳಿಕ ಸೆಪ್ಟೆಂಬರ್‌ ತಿಂಗಳಲ್ಲೇ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆ ಆಗಲಿದೆ ಎಂದು ಕಾಂಗ್ರೆಸ್‌ ಮುಖಂಡ ಸಿ.ಎಂ. ಇಬ್ರಾಹಿಂ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದರು. ಸರ್ಕಾರ ರಚನೆಯಲ್ಲಿ ಭಾಗವಹಿಸದವರೇ ಹೆಚ್ಚು ಮಾತನಾಡುತ್ತಿದ್ದಾರೆ. ಪ್ರಮುಖ ಷೇರು ಹೊಂದಿರುವ ನಾವು ಡಿವೆಡೆಂಡ್‌ ಕೇಳುತ್ತಿದ್ದೇವೆ. ಆದರೆ, ನಮ್ಮ ಸಮುದಾಯಕ್ಕೆ ತೀವ್ರ ಅನ್ಯಾಯ ಮಾಡಲಾಗುತ್ತಿದೆ. ನಾವು ಏನು ಎಂಬುದನ್ನು ಮುಂದಿನ ದಿನಗಳಲ್ಲಿ ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸರ್ಕಾರದ ಸಚಿವ ಸಂಪುಟದಲ್ಲಿರುವ ನಮ್ಮ ಸಮುದಾಯದವರು ಕೇವಲ ಉತ್ಸವ ಮೂರ್ತಿಗಳಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ನಮ್ಮ ಸಮುದಾಯ ತುಳಿತಕ್ಕೆ ಒಳಗಾಗಿದೆ. ಇದನ್ನು ಮೇಲಕ್ಕೆತ್ತುವ ಪ್ರಯತ್ನ ಯಾರಿಂದಲೂ ಆಗುತ್ತಿಲ್ಲ. ಗಣಪತಿ ಹಬ್ಬ ಆದ ಮೇಲೆ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆ ಆಗಲಿದೆ. ಅದನ್ನು ನೀವೇ ನೋಡುತ್ತೀರಿ ಎಂದು ಮಾಧ್ಯಮದವರಿಗೆ ತಿಳಿಸಿದರು.

ಸೆಪ್ಟೆಂಬರ್‌ ಬಳಿಕ ದೊಡ್ಡ ಗಂಟು ಸಿಗಲಿದೆ:

ಸಮ್ಮಿಶ್ರ ಸರ್ಕಾರದಲ್ಲಿ ನಾನು ಸಚಿವ ಸ್ಥಾನ ಕೇಳುವುದಿಲ್ಲ. ನನ್ನ ಸಾಮರ್ಥ್ಯ ಏನು ಎಂಬುದು ನನಗೆ ಗೊತ್ತಿದೆ. ನನ್ನ ಹಿಂದೆ ಸಾಕಷ್ಟುಜನರಿದ್ದಾರೆ. ಸದ್ಯ ಸಮುದ್ರದಲ್ಲಿ ಧುಮುಕಿದ್ದು, ನನ್ನ ಬಹುದೊಡ್ಡ ಗಂಟು ಕಳೆದುಹೋಗಿದೆ. ಅದನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದೇನೆ. ಸೆಪ್ಟೆಂಬರ್‌ ವೇಳೆಗೆ ಆ ಗಂಟು ಸಿಗಲಿದೆ. ಸೆಪ್ಟೆಂಬರ್‌ನಲ್ಲಿ ನನಗೆ ಬಹು ದೊಡ್ಡ ಗಂಟು ಸಿಗಲಿದೆ ಎಂದು ಸೂಕ್ಷ್ಮವಾಗಿ ನುಡಿದರು. ಸದ್ಯ ನಾನು ಉತ್ತರ ಕರ್ನಾಟಕ ಪ್ರವಾಸ ಮಾಡುತ್ತಿದ್ದೇನೆ. ಸೆಪ್ಟೆಂಬರ್‌ನಲ್ಲಿ ಅದು ಮುಗಿಯಲಿದೆ. ಆ ಬಳಿಕ ನನ್ನ ಶಕ್ತಿ ತೋರಿಸುತ್ತೇನೆ ಎಂದರು.

Follow Us:
Download App:
  • android
  • ios