ಗಾಂಧೀಜಿ ಆರೋಗ್ಯ ಹೇಗಿತ್ತು?| ಮೊದಲ ಬಾರಿ ರಹಸ್ಯ ಬಹಿರಂಗ| ರಾಷ್ಟ್ರಪಿತನ ತೂಕ ಬರೀ 47 ಕೇಜಿ!| ಅವರಿಗೆ ಹೈಬೀಪಿ ಇತ್ತು, 3 ಬಾರಿ ಮಲೇರಿಯಾ ಬಂದಿತ್ತು| ಗಾಂಧೀಜಿ ಪ್ರತಿದಿನ 18 ಕಿ.ಮೀ. ನಡೆಯುತ್ತಿದ್ದರು

ಧರ್ಮಶಾಲಾ[ಮಾ.26]: ಅಹಿಂಸಾ ಚಳವಳಿಯನ್ನು ಹುಟ್ಟುಹಾಕಿ ಇಡೀ ಜಗತ್ತಿನ ಮೇಲೆ ಪ್ರಭಾವ ಬೀರಿದ ಮಹಾತ್ಮ ಗಾಂಧೀಜಿಯವರ ಆರೋಗ್ಯ ಹೇಗಿತ್ತು? ಅವರಿಗೆ ಏನೇನು ಅನಾರೋಗ್ಯದ ಸಮಸ್ಯೆಗಳಿದ್ದವು ಎಂಬಿತ್ಯಾದಿ ಮಾಹಿತಿಗಳು ಇದೇ ಮೊದಲ ಬಾರಿ ಬಹಿರಂಗಗೊಂಡಿವೆ. ದೆಹಲಿಯ ರಾಷ್ಟ್ರೀಯ ಗಾಂಧಿ ವಸ್ತುಸಂಗ್ರಹಾಲಯದಲ್ಲಿರುವ ಗಾಂಧೀಜಿಯವರ ಆರೋಗ್ಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ‘ಗಾಂಧಿ ಆ್ಯಂಡ್‌ ಹೆಲ್ತ್‌ 150’ ಎಂಬ ಪುಸ್ತಕದ ರೂಪದಲ್ಲಿ ಪ್ರಕಟಿಸಲಾಗಿದ್ದು, ಧರ್ಮಶಾಲಾದಲ್ಲಿ ದಲೈಲಾಮಾ ಅವರು ಕೃತಿ ಬಿಡುಗಡೆ ಮಾಡಿದ್ದಾರೆ.

ಪುಸ್ತಕದಲ್ಲಿರುವ ಕುತೂಹಲಕರ ಮಾಹಿತಿಗಳು ಇಂತಿವೆ:

- ಗಾಂಧೀಜಿ ಕೇವಲ 46.7 ಕೇಜಿ (1939ರಲ್ಲಿ) ತೂಕವಿದ್ದರು. ಅವರ ಎತ್ತರ 5.5 ಅಡಿ. ಬಾಡಿ ಮಾಸ್‌ ಇಂಡೆಕ್ಸ್‌ 17.1. ಇಂದಿನ ಮಾನದಂಡಗಳ ಪ್ರಕಾರ ಅವರು ಅಂಡರ್‌ವೇಯ್‌್ಟಇದ್ದರು.

- ಗಾಂಧೀಜಿ 1925, 1936 ಹಾಗೂ 1944ರಲ್ಲಿ ಮೂರು ಬಾರಿ ಮಲೇರಿಯಾಕ್ಕೆ ತುತ್ತಾಗಿದ್ದರು. 1919ರಲ್ಲಿ ಮೂಲವ್ಯಾಧಿ ಹಾಗೂ 1924ರಲ್ಲಿ ಅಪೆಂಡಿಸೈಟಿಸ್‌ಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಲಂಡನ್‌ನಲ್ಲಿದ್ದಾಗ ಅವರಿಗೆ ಶ್ವಾಸಕೋಶ ಹಾಗೂ ಎದೆಯ ಉರಿಯೂತವಿತ್ತು.

- ಅವರ ಹೃದಯದ ಆರೋಗ್ಯ ಅದ್ಭುತವಾಗಿತ್ತು. 1939ರಲ್ಲಿ ಇಸಿಜಿ ಮಾಡಿದಾಗ ಎಲ್ಲವೂ ಸಹಜವಾಗಿತ್ತು.

- 1927ರಿಂದಲೇ ಅವರಿಗೆ ಅಧಿಕ ರಕ್ತದೊತ್ತಡದ ಸಮಸ್ಯೆಯಿತ್ತು. 1940ರಲ್ಲಿ ಪರೀಕ್ಷಿಸಿದಾಗ ಅದು 220/110 ಇತ್ತು. ಕೆಲ ತಿಂಗಳ ನಂತರ ಅವರು ಡಾ

ಸುಶೀಲಾ ನಯ್ಯರ್‌ ಎಂಬುವರಿಗೆ ಪತ್ರ ಬರೆದು ‘ನನಗೆ ರಕ್ತದೊತ್ತಡ ಹೆಚ್ಚಾಗಿತ್ತು. ಅದಕ್ಕಾಗಿ ಮೂರು ಹನಿ ಸರ್ಪಗಂಧ ಸೇವಿಸಿದ್ದೇನೆ’ ಎಂದಿದ್ದರು. ಅವರಿಗೆ ಹೈಬೀಪಿ ಇದ್ದರೂ ಹೇಗೆ ಯಾವಾಗಲೂ ಶಾಂತವಾಗಿರುತ್ತಿದ್ದರು ಎಂಬುದು ಅಚ್ಚರಿಯ ವಿಷಯ.

- ಗಾಂಧೀಜಿ ಪ್ರತಿದಿನ 18 ಕಿ.ಮೀ. ನಡೆಯುತ್ತಿದ್ದರು. 1913ರಿಂದ 1948ರ ನಡುವೆ ಅವರು 79,000 ಕಿ.ಮೀ. ನಡೆದಿದ್ದರು! ಇದು ಭೂಮಿಯನ್ನು ಎರಡು ಬಾರಿ ಸುತ್ತುವುದಕ್ಕೆ ಸಮ.

- ತಾಯಿಯ ಹಾಲು ಕುಡಿಯುವಷ್ಟುದಿನ ಮಾತ್ರ ಮನುಷ್ಯನಿಗೆ ಹಾಲಿನ ಅಗತ್ಯವಿದೆ ಎಂದು ಗಾಂಧೀಜಿ ಹೇಳುತ್ತಿದ್ದರು. ಹೀಗಾಗಿ ಅವರು ಹಾಲು ಕುಡಿಯುತ್ತಿರಲಿಲ್ಲ.

- ಗಾಂಧೀಜಿಗೆ ಔಷಧಗಳನ್ನು ಕಂಡರೆ ಆಗುತ್ತಿರಲಿಲ್ಲ. ಆದ್ದರಿಂದ ಆಧುನಿಕ ವೈದ್ಯರನ್ನು ದೂರವಿಟ್ಟು ನಿಸರ್ಗ ಚಿಕಿತ್ಸೆ ಹಾಗೂ ನೇಚರೋಪತಿಯಲ್ಲಿ ಪರಿಹಾರ ಹುಡುಕುತ್ತಿದ್ದರು.