ಛತ್ತೀಸ್'ಗಡ್'ನ ಪೊಲೀಸರೆದು ವಿಚಿತ್ರ ಪ್ರಕರಣವೊಂದು ಬಂದು ನಿಂತಿದ್ದು, ಈ ಪ್ರಕರಣ ಭೇದಿಸುವಲ್ಲಿ ಸದ್ಯ ಪೊಲೀಸರು ಬ್ಯುಸಿಯಾಗಿದ್ದಾರೆ. ಶನಿವಾರದಂದು ಮೃತಪಟ್ಟು ಅಂತ್ಯಕ್ರಿಯೆಯಾದ ಯುವತಿಯೊಬ್ಬಳು ಸೋಮವಾರದಂದು ತನ್ನ ಮನೆಗೆ ಮರಳಿದ್ದೇ ಪೊಲೀಸರ ತಲೆಕೆಡಿಸಿದೆ. ಹಾಗಾದ್ರೆ ಅಲ್ಲಿ ನಿಜಕ್ಕೂ ನಡೆದಿದ್ದೇನು? ಇಲ್ಲಿದೆ ವಿವರ.

ರಾಯ್ಪುರ(ಮೇ.24): ಛತ್ತೀಸ್'ಗಡ್'ನ ಪೊಲೀಸರೆದು ವಿಚಿತ್ರ ಪ್ರಕರಣವೊಂದು ಬಂದು ನಿಂತಿದ್ದು, ಈ ಪ್ರಕರಣ ಭೇದಿಸುವಲ್ಲಿ ಸದ್ಯ ಪೊಲೀಸರು ಬ್ಯುಸಿಯಾಗಿದ್ದಾರೆ. ಶನಿವಾರದಂದು ಮೃತಪಟ್ಟು ಅಂತ್ಯಕ್ರಿಯೆಯಾದ ಯುವತಿಯೊಬ್ಬಳು ಸೋಮವಾರದಂದು ತನ್ನ ಮನೆಗೆ ಮರಳಿದ್ದೇ ಪೊಲೀಸರ ತಲೆಕೆಡಿಸಿದೆ. ಹಾಗಾದ್ರೆ ಅಲ್ಲಿ ನಿಜಕ್ಕೂ ನಡೆದಿದ್ದೇನು? ಇಲ್ಲಿದೆ ವಿವರ.

ವಾಸ್ತವವಾಗಿ ಮೇ 19ರಂದು ಇಲ್ಲಿನ ಕಾಡೊಂದರಲ್ಲಿ ಯುವತಿಯ ಮೃತದೇಹ ಪತ್ತೆಯಾದ ಸುದ್ದಿ ಪೊಲೀಸರಿಗೆ ಸಿಗುತ್ತದೆ. ಸ್ಥಳಕ್ಕಾಗಮಿಸಿ ಪರಿಶೀಲಿಸಿದ ಪೊಲೀಸರಿಗೆ ಯುವತಿ ಸುಮಾರು 20ರ ಹರೆಯದವಳು ಎಂದು ತಿಳಿದು ಬರುತ್ತದೆ. ಆಕೆಯ ಮುಖದಲ್ಲಿ ಗಂಭೀರವಾದ ಸುಟ್ಟ ಗಾಯಗಳಿದ್ದ ಕಾರಣದಿಂದ ಗುರುತು ಹಿಡಿಯಲು ಸಾಧ್ಯವಾಗುವುದಿಲ್ಲ. ಆದರೆ ಮೃತದೇಹದ ಬಳಿ ಹತ್ತಿರದಲ್ಲೇ ಇದ್ದ ಚಪ್ಪಲಿಗಳು ಹಾಗೂ ಒಂದು ನೀರಿನ ಬಾಟಲ್ ಕಂಡುಬರುತ್ತದೆ.

ಮುಂದಿನ ತನಿಖೆಗಾಗಿ ಪಂಚನಾಮೆ ಹಾಕಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡುತ್ತಾರೆ. ತನಿಖೆ ಮುಂದುವರೆಸಿದ ಪೊಲೀಸರಿಗೆ ಮೃತದೇಹ ತೆಂದುಲೋತಾ ಪ್ರದೇಶದಲ್ಲಿ ವಾಸವಿದ್ದ ಸಮೃದ್ಧಿ ಪಾಠಕ್ ಎಂಬಾಕೆಯದ್ದು ಎಂದು ತಿಳಿದು ಬರುತ್ತದೆ. ಹೀಗಾಗಿ ಆಕೆಯ ಮನೆಯವರನ್ನು ಕರೆಸಿದ ಪೊಲೀಸರು ಅವರ ಹೇಳಿಕೆ ಪಡೆದು ಮೃತದೇಹವನ್ನು ಅವರಿಗೆ ಹಸ್ತಾಂತರಿಸುತ್ತಾರೆ. ಮನೆಯವರು ಶನಿವಾರದಂದು ಯುವತಿಯ ಅಂತ್ಯಕ್ರಿಯೆ ನಡೆಸುಯತ್ತಾರೆ.

ಇನ್ನು ವಿಚಾರಣೆಯ ಸಂದರ್ಭದಲ್ಲಿ ಸಮೃದ್ಧಿ ಒಂದು ತಿಂಗಳ ಹಿಂದೆಯೇ ನಾಪತ್ತೆಯಾಗಿದ್ದು, ಆಕೆಗೆ ಸಾಮಾಜಿಕ ಜಾಲಾತಯಾಣಗಳಲ್ಲಿ ಹಲವಾರು ಮಂದಿ ಗೆಳೆಯರಿದ್ದರು ಎಂಬ ವಿಚಾರ ತಿಳಿದು ಬರುತ್ತದೆ. ತನಿಖೆ ನಡೆಸುತ್ತಿದ್ದ ಕ್ರೈಂ ಬ್ರಾಂಚ್ ಪೊಲೀಸರಿಗೆ ಸಾಮಾಜಿಕ ಜಾಲಾಥಾಣದಲ್ಲಿ ಸಮೃದ್ಧಿ ತನ್ನ ಓರ್ವ ಗೆಳೆಯನಿಗೆ ಕರೆ ಮಾಡುವಂತೆ ಹೇಳಿ ಮೆಸೇಜ್ ಮಾಡಿದ ನಂಬರ್ ಒಂದು ಸಿಗುತ್ತದೆ.

ಮಾಧ್ಯಮದಲ್ಲಿ ಪ್ರಸಾರವಾದ ವರದಿಯನ್ವಯ ಸೋಮವಾರದಂದು ನಂಬರ್'ನ ಲೊಕೇಷನ್ ಫಾಲೋ ಮಾಡಿ ಹೋದ ಪೊಲೀಸರು ದಂಗಾಗಿದ್ದಾರೆ ಯಾಕೆಂದರೆ ಸಮೃದ್ಧಿ ಅಲ್ಲಿ ಜೀವಂತವಾಗಿದ್ದಳು ಎಂದು ತಿಳಿದು ಬಂದಿದೆ. ಕೂಡಲೇ ಆಕೆಯನ್ನು ವಶಕ್ಕೆ ಪಡೆದ ಪೊಲೀಸರು ಆಕೆಯ ಮನೆಯವರಿಗೆ ಆಕೆಯನ್ನು ಒಪ್ಪಿಸಿದ್ದಾರೆ. ಇನ್ನು ವಿಚಾರಣೆಯ ಸಂದರ್ಭದಲ್ಲಿ ಸಮೃದ್ಧಿ ಕೊಲೆ ಹಾಗೂ ಪತ್ತೆಯಾದ ಮೃತದೇಹದ ಕುರಿತಾಗಿ ತನಗೆ ತಿಳಿದಿಲ್ಲವೆಂದು ತಿಳಿಸಿದ್ದಾಳೆ. ಇದಾದ ಬಳಿಕ ಶನಿವಾರದಂದು ಅಂತ್ಯಕ್ರಿಯೆ ಮಾಡಿದ ಮೃತದೇಹ ಯಾರದ್ದು ಎಂಬ ಪ್ರಶ್ನೆ ಪೊಲೀಸರಿಗೆ ಕಾಡಲಾರಂಭಿಸಿದೆ.