ಮುಂಬೈ(ಆ.22): ಕೇರಳ ಪ್ರವಾಹಕ್ಕೆ ಇಡೀ ದೇಶ ಮಿಡಿಯುತ್ತಿದೆ. ಸಮಾಜದ ಎಲ್ಲಾ ವರ್ಗದ ಜನ ತಮ್ಮ ಕೈಲಾದಷ್ಟು ಸಹಾಯ ನೆರೆ ಸಂತ್ರಸ್ತರಿಗಾಗಿ ಮಾಡುತ್ತಿದ್ದಾರೆ. ಅದರಂತೆ ಮಹಾರಾಷ್ಟ್ರದ ಲೈಂಗಿಕ ಕಾರ್ಯಕರ್ತರು ಕೂಡ ಪ್ರವಾಹ ಪೀಡಿತ ಕೇರಳಕ್ಕೆ ಧನಸಹಾಯ ಮಾಡಿದ್ದಾರೆ.

ಕೇರಳ ಪ್ರವಾಹ ಸಂತ್ರಸ್ತರಿಗಾಗಿ ಮಹಾರಾಷ್ಟ್ರದ ಲೈಂಗಿಕ ಕಾರ್ಯಕರ್ತರು  21 ಸಾವಿರ ರೂ. ನೆರವು ನೀಡಿದ್ದು, ಮುಂದಿನ ದಿನಗಳಲ್ಲಿ 1 ಲಕ್ಷ ರೂ. ಸಂಗ್ರಹಿಸುವ ಗುರಿ ಹೊಂದಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸ್ನೇಹಾಲಯ ಎಂಬ ಎನ್ ಜಿಒ ಮುಖ್ಯಸ್ಥ ದೀಪಕ್ ಬುರಮ್, ಕೇರಳ ನೆರೆ ಸಂತ್ರಸ್ತರಿಗಾಗಿ ಲೈಂಗಿಕ ಕಾರ್ಯಕರ್ತರು ತಾವೇ ಖುದ್ದಾಗಿ ಧನಸಹಾಯ ಮಾಡಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ. ಈಗಾಗಲೇ ಸುಮಾರು 21 ಸಾವಿರ ರೂ. ಸಂಗ್ರಹಿಸಿರುವ ಇವರು, 1 ಲಕ್ಷ ರೂ. ಸಂಗ್ರಹಿಸಿ ಕೇರಳಕ್ಕೆ ಕಳುಹಿಸುವ ಇರಾದೆ ಹೊಂದಿದ್ದಾರೆ.

ಇನ್ನು ಲೈಂಗಿಕ ಕಾರ್ಯಕರ್ತರು ಪ್ರವಾಹ ಪೀಡಿತ ಜನರಿಗಾಗಿ ಸಹಾಯ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಚೆನ್ನೈನಲ್ಲಿ ಭೀಕರ ಪ್ರವಾಹ ಉಂಟಾದಾಗಲೂ ಕೂಡ ಇವರು 1 ಲಕ್ಷ ರೂ. ಸಂಗ್ರಹಿಸಿದ್ದರು ಎಂದು ಬುರಮ್ ಮಾಹಿತಿ ನೀಡಿದ್ದಾರೆ.