ಸತಾರಾ(ನ.04): ಬಡವನಿಗಿರುವ ನಿಯತ್ತು, ಸ್ವಾಭಿಮಾನಕ್ಕೆ ಪರ್ಯಾಯವೆಲ್ಲಿದೆ ಹೇಳಿ?. ತುತ್ತು ಅನ್ನವಾದರೂ ಸರಿ, ನಿಯತ್ತಿನ ದುಡಿಮೆಯಿಂದಲೇ ಹೊಟ್ಟೆ ತುಂಬಿಸಿಕೊಳ್ಳುವ ಪಾಠ ಆತನಿಂದಲೇ ಕಲಿಯಬೇಕು.

ಅದರಂತೆ ಬಸ್ ನಿಲ್ದಾಣದಲ್ಲಿ ಬಿದ್ದಿದ್ದ ಸುಮಾರು 40 ಸಾವಿರ ರೂ. ಇದ್ದ ಹಣದ ಚೀಲವನ್ನು, ಬಡವನೋರ್ವ ಅದರ ನೈಜ ವಾರಸುದಾರನಿಗೆ ತಲುಪಿಸಿ ನಿಯತ್ತಿನ ಪಾಠ ಹೇಳಿ ಕೊಟ್ಟ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಸತಾರಾ ಜಿಲ್ಲೆಯ ದಹಿವಾಡಿ ಬಸ್ ನಿಲ್ದಾಣದಲ್ಲಿ 40 ಸಾವಿರ ರೂ. ಇದ್ದ ಹಣದ ಚೀಲವನ್ನು ಧನಾಜಿ ಜಗಡಳೆ ಎಂಬುವವರು ಗುರುತಿಸಿದ್ದರು. ಜೀವನ ಸಾಗಿಸಲು ದಿನಗೂಲಿಯಾಗಿ ದುಡಿಯುವ ಜಗಡಳೆ, ಹಣವನ್ನು ಅದರ ನೈಜ ವಾರಸುದಾರರಿಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಜಗಡಳೆ ಅವರ ಕಾರ್ಯ ಮೆಚ್ಚಿ ಹಣದ ಮಾಲೀಕ ಆತನಿಗೆ 1 ಸಾವಿರ ರೂ. ಕೊಡಲು ಮುಂದಾದಾಗ, ದಹಿವಾಡಿಯಿಂದ ತಮ್ಮ ಗ್ರಾಮಕ್ಕೆ ಹೋಗಲು ಬೇಕಾದ ಬಸ್ ಚಾರ್ಜ್‌ 7 ರೂ.ವನ್ನಷ್ಟೇ ಪಡೆದು ಜಗಡಳೆ ವಾಪಸ್ ಮನೆ ತಲುಪಿದ್ದಾರೆ.

ತಮ್ಮ ಗ್ರಾಮದಿಂದ ಹಣದ ಮಾಲೀಕನನ್ನು ಭೇಟಿಯಾಗಲು ಬಂದಿದ್ದ ಜಗಡಳೆ ಜೇಬಿನಲ್ಲಿ ಕೇವಲ 3 ರೂ. ಮಾತ್ರವಿತ್ತು. ಮರಳಿ ಗ್ರಾಮಕ್ಕೆ ಹೋಗಲು ತಗುಲುವ ಬಸ್ ದರವನ್ನಷ್ಟೇ ಪಡೆದು ಜಗಡಳೆ ಸ್ವಾಭಿಮಾನ ಮೆರೆದಿದ್ದಾರೆ.

ಇನ್ನು ಜಗಡಳೆ ಮಾನವೀಯತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚಿಗೆ ಗಳಿಸಿದ್ದು, ಅನಾಥವಾಗಿ ಬಿದ್ದಿದ್ದ ಹಣದ ಚೀಲವನ್ನು ಅದರ ನೈಜ ವಾರಸುದಾರನಿಗೆ ತಲುಪಿಸಿದ ಅವರ ಕಾರ್ಯವನ್ನು ಎಲ್ಲರೂ ಶ್ಲಾಘಿಸಿದ್ದಾರೆ.