ಮುಂಬೈ[ಆ.10]: ರಾಜಕಾರಣಿಗಳು ಜನರ ಮುಂದೆ ಭಾಷಣ ಬಿಗಿದು, ಕೈ ಬೀಸಿ ಮತಕೇಳುವುದು ರೂಢಿಗತ. ಹಾಗೆಂದು ಪ್ರವಾಹದಿಂದ ನಲುಗಿ ದುಃಖದಿಂದ ಇರುವ ಜನರ ಬಳಿ ಹೋಗಿ ನಗು ಬೀರುತ್ತಾ, ಕೈ ಬೀಸಿದರೆ ಯಾರಿಗೆ ತಾನೆ ಇಷ್ಟವಾಗುತ್ತದೆ?

ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಗಿರೀಶ್‌ ಮಹಾಜನ್‌ ಇಂಥದ್ದೊಂದು ಎಡವಟ್ಟು ಮಾಡಿಕೊಂಡು ಪೇಚಿಗೆ ಸಿಲುಕಿದ್ದಾರೆ. ಪ್ರವಾಹ ಪೀಡಿತ ಕೊಲ್ಲಾಪುರಕ್ಕೆ ತೆರಳಿದ್ದ ಅವರು ದೋಣಿಯಲ್ಲಿ ವಿಹಾರ ಮಾಡುತ್ತಾ ಅಪರಿಚಿತ ವ್ಯಕ್ತಿಯೊಬ್ಬನ ಜೊತೆ ಹಲ್ಲು ಕಿರಿಯುತ್ತಾ ಸೆಲ್ಫಿ ವಿಡಿಯೋ ಮಾಡಿದ್ದಾರೆ.

ಸಚಿವರ ಈ ವರ್ತನೆ ವಿವಾದಕ್ಕೆ ಕಾರಣವಾಗಿದೆ. ಸಚಿವರು ನೆರೆ ಪರಿಶೀಲನೆಗೆ ತೆರಳಿದ್ದಾರೆಯೇ ಅಥವಾ ಪ್ರವಾಸಕ್ಕೆ ಹೋಗಿದ್ದಾರೆಯೇ ಎಂದು ಎನ್‌ಸಿಪಿ ಪ್ರಶ್ನಿಸಿದೆ. ಅಲ್ಲದೇ ಸಚಿವರ ರಾಜೀನಾಮೆಗೂ ಒತ್ತಾಯಿಸಿದೆ.