ಮುಂಬೈ/ಚಂಡೀಗಢ [ಅ.21]:  ಬಿಜೆಪಿ ಹಾಗೂ ಕಾಂಗ್ರೆಸ್‌ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭೆ ಚುನಾವಣೆಗಳು ಇಂದು ನಡೆಯುತ್ತಿದೆ. ಇದೇ ವೇಳೆ, ದೇಶದ 18 ರಾಜ್ಯಗಳ 51 ವಿಧಾನಸಭೆ ಕ್ಷೇತ್ರಗಳು ಹಾಗೂ 2 ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗಳೂ ನಡೆಯಲಿವೆ.

ಲೋಕಸಭೆ ಚುನಾವಣೆ ಹಾಗೂ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆಗಳು ಇವಾಗಿದ್ದು, ಕೇಂದ್ರ ಸರ್ಕಾರಕ್ಕೆ ಒಂದು ರೀತಿ ಪರೀಕ್ಷೆಯಾಗಿದೆ. ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಈಗ ಬಿಜೆಪಿಯೇ ಅಧಿಕಾರದಲ್ಲಿದ್ದು, ಆಡಳಿತ ವಿರೋಧಿ ಅಲೆ ಮೆಟ್ಟಿನಿಂತು ಪುನಃ ಗೆಲ್ಲಲೇಬೇಕೆಂದು ಪಣ ತೊಟ್ಟಿವೆ. ಇದಕ್ಕೆ ಪೂರಕವಾಗಿ ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿ ಭರ್ಜರಿಯಾಗಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿವೆ.

ಅಕ್ಟೋಬರ್‌ 24ರಂದು ಎಲ್ಲ ಕಡೆ ಏಕಕಾಲಕ್ಕೆ ಮತ ಎಣಿಕೆ ನಡೆಯಲಿದೆ. ಇದೇ ವೇಳೆ, ಸೋಮವಾರ ಸಂಜೆ ವಿವಿಧ ಮಾಧ್ಯಮ ಸಂಸ್ಥೆಗಳು ಮತದಾನೋತ್ತರ ಸಮೀಕ್ಷೆ ನಡೆಸಲಿದ್ದು, ಫಲಿತಾಂಶ ಏನಾಗಬಹುದು ಎಂಬ ಕುತೂಹಲ ಮೂಡಿದೆ.

ಮಹಾರಾಷ್ಟ್ರ: 288 ಕ್ಷೇತ್ರ, 8.98 ಕೋಟಿ ಮತದಾರರು

ಮಹಾರಾಷ್ಟ್ರ ವಿಧಾನಸಭೆಯ ಬಲಾಬಲ 288 ಆಗಿದ್ದು, 8.98 ಕೋಟಿ ಮತದಾರರು ಮತದಾನಕ್ಕೆ ಅರ್ಹರಾಗಿದ್ದಾರೆ. 3,237 ಸ್ಪರ್ಧಿಗಳು ಕಣಕ್ಕಿಳಿದಿದ್ದಾರೆ. 96,661 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 6.5 ಲಕ್ಷ ಚುನಾವಣಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.

ರಾಜ್ಯದಲ್ಲಿ ಈಗ ಬಿಜೆಪಿ-ಶಿವಸೇನೆ ಹಾಗೂ ಸಣ್ಣಪಕ್ಷಗಳ ಮೈತ್ರಿಕೂಟ ಅಧಿಕಾರದಲ್ಲಿದ್ದು, ಹಾಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರೇ ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಈ ಕೂಟದ ವಿರುದ್ಧ ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿಕೂಟ ಅಖಾಡದಲ್ಲಿದೆ. ಆದರೆ ಪ್ರಚಾರದ ವೇಳೆ ಬಿಜೆಪಿ-ಶಿವಸೇನೆಯ ಅಬ್ಬರವೇ ಹೆಚ್ಚು ಕಂಡುಬಂದಿದೆ. ಕಾಂಗ್ರೆಸ್‌-ಎನ್‌ಸಿಪಿಗೆ ಭಿನ್ನಮತ ಬಹುವಾಗಿ ಕಾಡಿದೆ.

ಹರ್ಯಾಣ: 90 ಕ್ಷೇತ್ರ, 1.83 ಕೋಟಿ ಮತದಾರರು

ಹರ್ಯಾಣ ವಿಧಾನಸಭೆ ಬಲಾಬಲ 90 ಆಗಿದ್ದು, 1.83 ಕೋಟಿ ಮತದಾರರು ಮತ ಚಲಾಯಿಸುವ ಅಧಿಕಾರ ಪಡೆದಿದ್ದಾರೆ. 19,578 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಹಾಗೂ 1,169 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಹಾಲಿ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್‌ ನೇತೃತ್ವದಲ್ಲೇ ಈ ಬಾರಿ ಬಿಜೆಪಿ ಮತ್ತೆ ಚುನಾವಣೆ ಎದುರಿಸುತ್ತಿದ್ದು, ಪುನಃ ಅಧಿಕಾರಕ್ಕೆ ಬರುವ ಸಂಕಲ್ಪ ತೊಟ್ಟಿದೆ. ಇನ್ನು ಭೂಪಿಂದರ್‌ ಸಿಂಗ್‌ ಹೂಡಾ ನೇತೃತ್ವದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದರೂ, ಹಿರಿಯ ನಾಯಕ ಅಶೋಕ್‌ ತನ್ವರ್‌ ಅವರು ಬಂಡಾಯ ಎದ್ದು ಕಾಂಗ್ರೆಸ್‌ ತೊರೆದಿರುವುದು ಪಕ್ಷಕ್ಕೆ ಬಿಸಿ ತಾಗಿಸಿದೆ.