ಬೆಳಗಾವಿ :  ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಬೇಕೆಂಬ ರಾಜ್ಯದ ಮನವಿಗೆ ನೆರೆಯ ಮಹಾರಾಷ್ಟ್ರ ಸರ್ಕಾರ ಸಕಾರಾತ್ಮವಾಗಿ ಸ್ಪಂದಿಸಿದೆ. ನೀರು ಬಿಡುಗಡೆಗೆ ಅಗತ್ಯ ಕ್ರಮಗೊಳ್ಳುವ ಭರವಸೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರು ರಾಜ್ಯದ ಬಿಜೆಪಿ ಹಾಗೂ ಕಾಂಗ್ರೆಸ್‌ ನಿಯೋಗಕ್ಕೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ, ರಾಯಬಾಗ, ಚಿಕ್ಕೋಡಿ, ನಿಪ್ಪಾಣಿ ಸೇರಿದಂತೆ ವಿವಿಧ ಭಾಗಗಳಲ್ಲಿ ಹಾಗೂ ಬಾಗಲಕೋಟೆಯ ತೇರದಾಳ, ಜಮಖಂಡಿ, ಮುಧೋಳ ಸೇರಿದಂತೆ ಇತರೆ ಗ್ರಾಮಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿ ಹಾಗೂ ಕಾಂಗ್ರೆಸ್‌ ನಿಯೋಗ ಶುಕ್ರವಾರ ದೇವೇಂದ್ರ ಫಡ್ನವಿಸ್‌ ಹಾಗೂ ನೀರಾವರಿ ಸಚಿವ ಗಿರೀಶ ಮಹಾಜನ್‌ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ತಕ್ಷಣವೇ ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ದೂರವಾಣಿ ಮೂಲಕ ಕೋಯ್ನಾ ಜಲಾಯದಿಂದ ಕೃಷ್ಣಾ ನದಿಗೆ ನೀರು ಹರಿಸಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಕರ್ನಾಟಕಕ್ಕೂ ಫಡ್ನವಿಸ್‌ ಮನವಿ:  ಇದೇವೇಳೆ ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವಿಸ್‌, ಬೇಸಿಗೆಯಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ನೀರು ಬಿಡುತ್ತೇವೆ. ಅದರಂತೆ ಕರ್ನಾಟಕ ಕೂಡ ಆಲಮಟ್ಟಿಜಲಾಶಯದಿಂದ ಮಳೆಗಾಲದಲ್ಲಿ ಹೆಚ್ಚುವರಿಯಾಗಿ ಹರಿದು ಹೋಗುವ ನೀರನ್ನು ಸಾಂಗ್ಲಿ, ಜತ್ತ ಸೇರಿದಂತೆ ಇತರೆ ಭಾಗಕ್ಕೆ ನೀರು ಹರಿಸಬೇಕು. ಪರಸ್ಪರ ನೀರು ಹಂಚಿಕೆಯ ಒಡಂಬಡಿಕೆ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದ್ದಾರೆ. ಅಲ್ಲದೇ ರಾಜ್ಯದ ಬೃಹತ್‌ ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಿ.ಕೆ.ಶಿವಕುಮಾರ್‌ ಮೇ 23ರ ನಂತರ ಅಧಿಕಾರಿಗಳೊಂದಿಗೆ ತಮ್ಮನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ನೀರು ಹರಿಸಲು ಮಹಾರಾಷ್ಟ್ರ ಸರ್ಕಾರ ಸ್ಪಂದನೆ ನೀಡಿದ್ದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.