‘ಕಸಾಯಿಖಾನೆಗೆ ಸಾಗಿಸುವ ಉದ್ದೇಶಕ್ಕೆ ಜಾನುವಾರು ಪೇಟೆಗಳಲ್ಲಿ ಪಶುಗಳನ್ನು ಮಾರಾಟ ಮಾಡಕೂಡದು. ಕೃಷಿ/ಹೈನುಗಾರಿಕೆ ಉದ್ದೇಶಕ್ಕೆ ಮಾತ್ರ ಮಾರಬೇಕು' ಎಂದು ಕೇಂದ್ರ ಸರ್ಕಾರ ಕಳೆದ ವಾರ ಹೊರಡಿಸಿದ್ದ ವಿವಾದಾತ್ಮಕ ಅಧಿಸೂಚನೆಗೆ ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠ ಮಂಗಳವಾರ ತಡೆ ನೀಡಿದೆ.

ನವದೆಹಲಿ(ಮೇ.31): ‘ಕಸಾಯಿಖಾನೆಗೆ ಸಾಗಿಸುವ ಉದ್ದೇಶಕ್ಕೆ ಜಾನುವಾರು ಪೇಟೆಗಳಲ್ಲಿ ಪಶುಗಳನ್ನು ಮಾರಾಟ ಮಾಡಕೂಡದು. ಕೃಷಿ/ಹೈನುಗಾರಿಕೆ ಉದ್ದೇಶಕ್ಕೆ ಮಾತ್ರ ಮಾರಬೇಕು' ಎಂದು ಕೇಂದ್ರ ಸರ್ಕಾರ ಕಳೆದ ವಾರ ಹೊರಡಿಸಿದ್ದ ವಿವಾದಾತ್ಮಕ ಅಧಿಸೂಚನೆಗೆ ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠ ಮಂಗಳವಾರ ತಡೆ ನೀಡಿದೆ.

ಇದರಿಂದಾಗಿ ಕೇಂದ್ರದ ಮಹತ್ವಾಕಾಂಕ್ಷಿ ಕ್ರಮಕ್ಕೆ ಹಿನ್ನಡೆಯಾಗಿದ್ದು, ಅಧಿಸೂಚನೆ ವಿರೋಧಿಸಿ ಹೋರಾಟ ನಡೆಸುತ್ತಿರುವವರ ಕೈ ಈಗಿನ ಮಟ್ಟಿಗೆ ಮೇಲಾದಂತಾಗಿದೆ. ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಒಕ್ಕೂಟ ವ್ಯವಸ್ಥೆಗೆ ಮಾರಕ. ಜತೆಗೆ ಈಗಾಗಲೇ ಜಾರಿಯಲ್ಲಿರುವ ‘ಪ್ರಾಣಿ ಕ್ರೂರತ್ವ ತಡೆ ಕಾಯ್ದೆ-1960'ಕ್ಕೆ ಅಧಿಸೂಚನೆಯಲ್ಲಿರುವ ಅಂಶಗಳು ಪರ್ಯಾಯವಾಗಿವೆ. ಹೀಗಾಗಿ ಈ ಅಧಿಸೂಚನೆಯನ್ನು ರದ್ದುಗೊಳಿಸಬೇಕು ಎಂದು ಸಲ್ಲಿಸಲಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ| ಎಂ.ವಿ. ಮುರಳೀಧರನ್‌ ಹಾಗೂ ನ್ಯಾ| ಸಿ.ವಿ. ಕಾರ್ತಿಕೇಯನ್‌ ಅವರ ನ್ಯಾಯಪೀಠ, ಈ ಮಧ್ಯಂತರ ಆದೇಶ ಹೊರಡಿಸಿತು.
ಇದು ಆಹಾರಕ್ಕೆ ಸಂಬಂಧಿಸಿದ ವಿಷಯ. ಆಹಾರದ ಆಯ್ಕೆ ವೈಯಕ್ತಿಕ ಹಕ್ಕು. ಹೀಗಾಗಿ ಸಂಸತ್ತಿನ ಅನುಮೋದನೆ ಇಲ್ಲದೇ ಇಂಥ ಆದೇಶ ಹೊರಡಿಸಕೂಡದು ಎಂಬ ಅರ್ಜಿದಾರರ ವಾದವನ್ನು ಪರಿಗಣಿಸಿದ ನ್ಯಾಯಪೀಠ, 4 ವಾರದೊಳಗೆ ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಸೆಲ್ವಗೋಮತಿ ಹಾಗೂ ಆಶಿಕ್‌ ಇಲಾಹಿ ಬಾವಾ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದವರು.

ಮೇ 23ರಂದು ಅಧಿಸೂಚನೆ ಹೊರಡಿಸಿದ್ದ ಕೇಂದ್ರ ಪರಿಸರ ಸಚಿವಾಲಯ, ‘ಜಾನುವಾರು ಪೇಟೆಗಳಲ್ಲಿ ದನ, ಹೋರಿ, ಆಕಳು, ಎಮ್ಮೆ/ಕೋಣ, ಬೀಜ ಒಡೆದ ಹೋರಿ, ಕರು, ಒಂಟೆಗಳನ್ನು ಹತ್ಯೆಯ ಉದ್ದೇಶಕ್ಕೆ ಮಾರುವಂತಿಲ್ಲ. ಕೃಷಿ ಮತ್ತು ಹೈನುಗಾರಿಕೆ ಉದ್ದೇಶಕ್ಕೆ ಮಾತ್ರ ಮಾರಾಟ ಮಾಡಬೇಕು' ಎಂದು ಆದೇಶಿಸಿತ್ತು. ಇದರ ಜಾರಿಗೆ ರಾಜ್ಯ ಸರ್ಕಾರಗಳಿಗೆ 3 ತಿಂಗಳು ಕಾಲಾವಕಾಶ ನೀಡಿತ್ತು. ಇದರ ಬೆನ್ನಲ್ಲೇ ಎನ್‌ಡಿಎ ಹೊರತಾದ ಪಕ್ಷಗಳು ಕೇಂದ್ರದ ಆದೇಶದ ವಿರುದ್ಧ ಭಾರಿ ಪ್ರತಿಭಟನೆ ಆರಂಭಿಸಿವೆ.