ಭೋಪಲ್[ಜೂ.22]: ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಚಿಕಿತ್ಸೆ ಪಡೆಯುತ್ತಿದ್ದ ವೃದ್ಧನೊಬ್ಬನನ್ನು ಮೃತನೆಂದು ಘೋಷಿಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟ ಘಟನೆ ಮಧ್ಯ ಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಬಳಿಕ ಸರ್ಕಾರ ವೈದ್ಯರ ನಿರ್ಲಕ್ಷಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಷ್ಟಕ್ಕೂ ಏನಿದು ಪ್ರಕರಣ? ಇಲ್ಲಿದೆ ವಿವರ

ಅನಾರೋಗ್ಯದಿಂದ ಬಳಲುತ್ತಿದ್ದ ಕಾಶೀರಾಮ್ ಹೆಸರಿನ ವೃದ್ಧನಿಗೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗುರುವಾರ ರಾತ್ರಿ ವೈದ್ಯರು ಕಾಶೀರಾಮ್ ಸೋನಿ[72] ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಅಲ್ಲದೇ ಕಾಶೀರಾಮ್ ಚಿಕಿತ್ಸೆ ಪಡೆಯುತ್ತಿದ್ದಾಗ ಕೊನೆಯುಸಿರೆಳೆದಿದ್ದಾನೆ ಎಂಬ ಮಾಹಿತಿಯನ್ನು ಪೊಲೀಸರಿಗೂ ರವಾನಿಸಲಾಗಿದೆ.

ಬಳಿಕ ಕಾಶೀರಾಮ್‌ರನ್ನು ವೈದ್ಯರು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆ ನಡೆಸಲು ಬಂದಿದ್ದ ಅನಿಲ್ ಮೌರ್ಯ ವೃದ್ಧ ಉಸಿರಾಡುತ್ತಿರುವುದನ್ನು ಗಮನಿಸಿದ್ದಾರೆ. ಹೀಗಾಗಿ ಕೂಡಲೇ ಅವರನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಕಾಶೀರಾಮ್ ನನ್ನು ಮರು ದಾಖಲಿಸಿ ಚಿಕಿತ್ಸೆ ನೀಡಲಾರಂಭಿಸಿದ್ದಾರೆ. ಆದರೆ ಶುಕ್ರವಾರ ಬೆಳಗ್ಗೆ 10.20ಕ್ಕೆ ಕಾಶೀರಾಮ್ ಕೊನೆಯುಸಿರೆಳೆದಿದ್ದಾರೆ. 

ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಡಾ. ಎಸ್. ಆರ್ ರೋಶನ್ ಘಟನೆಯ ಕುರಿತಾಗಿ ಪ್ರತಿಕ್ರಿಯಿಸುತ್ತಾ 'ವೈದ್ಯರ ನಿರ್ಲಕ್ಷ ಇದರಲ್ಲಿ ಎದ್ದು ಕಾಣುತ್ತದೆ. ಹೀಗಾಗಿ ಘಟನೆ ಸಂಬಂಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ' ಎಂದಿದ್ದಾರೆ.