ಭೋಫಾಲ್‌: ವಿಧಾನಸಭೆ ಚುನಾವಣೆಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ರೈತರ ಸಾಲ ಮನ್ನಾ ಮಾಡುವ ಪ್ರಸ್ತಾವಕ್ಕೆ ಮಧ್ಯಪ್ರದೇಶದ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ಶನಿವಾರ ಅನುಮತಿ ನೀಡಿದೆ. ಸಾಲ ಮನ್ನಾಕ್ಕೆ ಕರ್ನಾಟಕ ಮಾದರಿಯಲ್ಲಿ ಮಧ್ಯಪ್ರದೇಶ ಸರ್ಕಾರ ನಿಯಮಾವಳಿಗಳನ್ನು ರೂಪಿಸುತ್ತಿರುವುದು ಗಮನಾರ್ಹ.

ಕರ್ನಾಟಕದ ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರ ಆದಾಯ ತೆರಿಗೆ ಪಾವತಿಸುವವರು ಹಾಗೂ ಸರ್ಕಾರಿ ಉದ್ಯೋಗಿಗಳಿಗೆ ಸಾಲ ಮನ್ನಾ ಸೌಲಭ್ಯ ಸಿಗುವುದಿಲ್ಲ ಎಂದು ಈಗಾಗಲೇ ಘೋಷಿಸಿದೆ. ಅದನ್ನೇ ಮಧ್ಯಪ್ರದೇಶ ಸರ್ಕಾರ ಕೂಡ ಜಾರಿಗೆ ತರಲು ನಿರ್ಧಾರ ಕೈಗೊಂಡಿದೆ.

2007ರ ಏ.1ರಿಂದ 2018ರ ಮಾ.31ರವರೆಗೆ ಮಾಡಿರುವ ರೈತ ಸಾಲ ಮನ್ನಾ ಆಗಲಿದೆ ಎಂದು ಈ ಹಿಂದೆ ಸರ್ಕಾರ ಹೇಳಿತ್ತು. ಆದರೆ ಈ ಕಟಾಫ್‌ ದಿನಾಂಕವನ್ನು ಬಿಜೆಪಿ ಆಗ್ರಹದ ಬಳಿಕ ಈಗ 2018ರ ಡಿ.12ರವರೆಗೂ ವಿಸ್ತರಿಸಲಾಗಿದೆ. ರಾಷ್ಟ್ರೀಕೃತ, ಸಹಕಾರಿ ಹಾಗೂ ಪ್ರಾದೇಶಿಕ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾದಿಂದ ರಾಜ್ಯದ ಬೊಕ್ಕಸಕ್ಕೆ 35ರಿಂದ 50 ಸಾವಿರ ಕೋಟಿ ರು.ವರೆಗೆ ಹೊರೆ ಬೀಳುವ ಅಂದಾಜಿದೆ ಎಂದು ಸಚಿವ ಜೀತು ಪತ್ವಾರಿ ತಿಳಿಸಿದ್ದಾರೆ.