ಚೆನ್ನೈ(ಜೂ.21): 92 ವರ್ಷದ ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ 84ನೇ ಗೌರವ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. ಸುಸ್ಥಿರ ಕೃಷಿ ವಿಧಾನ ಹಾಗೂ ಜಾಗತಿಕ ಆಹಾರ ಭದ್ರತೆ ವಿಚಾರದಲ್ಲಿ ನಡೆಸಿದ ಸಂಶೋಧನೆಗಾಗಿ ಗ್ವಾಲಿಯರ್ ಐಟಿಎಂ ವಿವಿಯಿಂದ ಡಾಕ್ಟರ್ ಆಫ್ ಲೆಟರ್ಸ್ ಡಿಗ್ರಿ ಪಡೆದುಕೊಂಡಿದ್ದಾರೆ.

ಸ್ವಾಮಿನಾಥನ್ ತಮ್ಮ 92 ವಯಸ್ಸಿನಲ್ಲಿ 84ನೇ ಗೌರವ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದು, ಇದರಲ್ಲಿ 24 ಗೌರವ ಡಾಕ್ಟರೇಟ್ ಪದವಿಗಳು ವಿವಿಧ ಅಂತರಾಷ್ಟ್ರೀಯ ವಿವಿಗಳಿಂದ ಲಭಿಸಿವೆ. ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಫೌಂಡೇಶನ್ ಆವರಣದಲ್ಲಿ ನಡೆದ ವಿಶೇಷ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಅವರಿಗೆ 84ನೇ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

ವಿವಿಯ ಕುಲಪತಿ ಡಾ.ಕಮಲ್ ಕಂತ್ ದ್ವಿವೇದಿ ಅವರು ಎಂ.ಎಸ್. ಸ್ವಾಮಿನಾಥನ್ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಮಾತನಾಡಿದ ಸ್ವಾಮಿನಾಥನ್, ಸುಸ್ಥಿರ ಕೃಷಿಯಿಂದ ಮಾತ್ರ ಹಸಿವು ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.