ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ. ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ | ಮೋದಿ ಸಂಪುಟಕ್ಕೆ ತಟ್ಟಿದ ಮೀ ಟೂ ಬಿಸಿ | ಇಂದು ರಾಜಿನಾಮೆ ಸಾಧ್ಯತೆ

ನವದೆಹಲಿ (ಅ. 12): ಪತ್ರಕರ್ತರಾಗಿದ್ದಾಗ ಹಲವಾರು ಸಹೋದ್ಯೋಗಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆಪಾದನೆಗೆ ಗುರಿಯಾಗಿರುವ ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ. ಅಕ್ಬರ್ ಅವರಿಂದ ಕೇಂದ್ರ ಸರ್ಕಾರ
ರಾಜೀನಾಮೆ ಪಡೆಯುವ ಸಾಧ್ಯತೆ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೈಜೀರಿಯಾ ಪ್ರವಾಸದಲ್ಲಿರುವ ಅಕ್ಬರ್ ಅವರು ಭಾನುವಾರದ ವೇಳೆಗೆ ನವದೆಹಲಿಗೆ ಆಗಮಿಸಲಿದ್ದಾರೆ. ‘ಮೀ ಟೂ’ ಅಭಿಯಾನದಲ್ಲಿ ಕೇಳಿಬಂದಿರುವ ಆರೋಪಗಳ ಕುರಿತು ವಿವರಣೆ ನೀಡಲು ಕೇಂದ್ರ ಸರ್ಕಾರ ಅವರಿಗೆ ಕಟ್ಟಕಡೆಯ ಅವಕಾಶ ನೀಡುತ್ತದೆ. ಅದಾದ ನಂತರ ತಲೆದಂಡ ಪಡೆಯಲು ಉದ್ದೇಶಿಸಿದೆ ಎಂದು ಅತ್ಯುನ್ನತ ಮೂಲಗಳು ತಿಳಿಸಿವೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ತನ್ನ ನಡತೆ ಹಾಗೂ ನಡವಳಿಕೆ ಮೇಲೆ ನೈತಿಕತೆಯ ಕಳಂಕ ಬರಕೂಡದು ಎಂದು ಬಿಜೆಪಿಯ ಮಾತೃಸಂಸ್ಥೆ ಆರ್‌ಎಸ್‌ಎಸ್ ಕಟ್ಟುನಿಟ್ಟಿನ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅಕ್ಬರ್ ವಿರುದ್ಧ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.

ಲೋಕಸಭೆಯ ಸಾರ್ವತ್ರಿಕ ಚುನಾವಣೆಗೆ 6 ತಿಂಗಳಷ್ಟೇ ಸಮಯವಿದೆ. ಅಕ್ಬರ್ ಮಧ್ಯಪ್ರದೇಶದಿಂದ ರಾಜ್ಯ ಸಭೆಗೆ ಆರಿಸಿ ಬಂದಿದ್ದು, ಆ ರಾಜ್ಯದಲ್ಲಿ ಮುಂದಿನ ತಿಂಗಳೇ ಚುನಾವಣೆ ನಡೆಯಬೇಕಿದೆ. ಅಕ್ಬರ್ ಸಂಪುಟದಲ್ಲಿ ಮುಂದುವರಿದರೆ, ಅವರ ವಿರುದ್ಧದ ಆರೋಪ ಚುನಾವಣಾ ವಿಷಯವಾಗಿ ಪರಿವರ್ತನೆ ಯಾಗಬಹುದು ಎಂಬ ಆತಂಕ ಬಿಜೆಪಿಯನ್ನು ಕಾಡುತ್ತಿದೆ.

ಮತ್ತೊಂದೆಡೆ, ಮಹಿಳೆಯರ ಹಿತರಕ್ಷಣೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಹಲವಾರು ಯೋಜನೆ, ಸಬ್ಸಿಡಿ ತಂದಿದೆ. ಅದಕ್ಕೆ ಹೊಡೆತ ಬೀಳಬಹುದು ಎಂಬ ಆತಂಕವೂ ಇರುವುದರಿಂದ ಅಕ್ಬರ್ ರಾಜೀನಾಮೆ ಪಡೆಯಲು ಉದ್ದೇಶಿಸಿದೆ ಎಂದು ಹೇಳಲಾಗಿದೆ. ‘ಮೀ ಟೂ’ ಆಂದೋಲನದ ಭಾಗವಾಗಿ 10 ಪತ್ರಕರ್ತೆರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.ಈ ನಡುವೆ ಆರೋಪದ ಬಗ್ಗೆ ಸ್ಪಷ್ಟನೆ ನೀಡುವುದು ಅಕ್ಬರ್‌ಗೆ ಬಿಟ್ಟಿದ್ದು ಎಂದು ಸಚಿವೆ ಸ್ಮತಿ ಇರಾನಿ ಹೇಳಿದ್ದಾರೆ