ಮೊದಲ ಟೆಸ್ಟ್'ನಲ್ಲಿ ಸೋಲನ್ನು ಅನುಭವಿಸಿ ಎರಡನೇ ಟೆಸ್ಟ್'ನಲ್ಲಿ ಗೆಲ್ಲುವ ಆತ್ಮವಿಶ್ವಾಸದಿಂದಲೇ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆಟಗಾರರಿಗೆ ಸ್ಪಿನ್ನರ್ ನಾಥನ್ ಲಯಾನ್ ಬೌಲಿಂಗ್ ಹೆಚ್ಚು ಹೊತ್ತು ಆಟವಾಡಲು ಬಿಡಲಿಲ್ಲ.
ಬೆಂಗಳೂರು(ಮಾ.03): ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್'ನಲ್ಲಿ ಭಾರತ ತಂಡದವರು ಅಕ್ಷರಶಃ ಪರೇಡ್ ನಡೆಸಿದರು.
ಮೊದಲ ಟೆಸ್ಟ್'ನಲ್ಲಿ ಸೋಲನ್ನು ಅನುಭವಿಸಿ ಎರಡನೇ ಟೆಸ್ಟ್'ನಲ್ಲಿ ಗೆಲ್ಲುವ ಆತ್ಮವಿಶ್ವಾಸದಿಂದಲೇ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆಟಗಾರರಿಗೆ ಸ್ಪಿನ್ನರ್ ನಾಥನ್ ಲಯಾನ್ ಬೌಲಿಂಗ್ ಹೆಚ್ಚು ಹೊತ್ತು ಆಟವಾಡಲು ಬಿಡಲಿಲ್ಲ. ಮೊದಲ ಟೆಸ್ಟ್'ನಲ್ಲಿ ಕೀಫೆ ನಮ್ಮ ಆಟಗಾರರಿಗೆ ಸೋಲಿನ ರುಚಿ ತೋರಿಸಿದ್ದರೆ ಈ ಪಂದ್ಯದ ಮೊದಲ ಇನ್ನಿಂಗ್ಸ್'ನಲ್ಲಿ ಲಯಾನ್ ಕಾಡಿ ಪೆವಿಲಿಯನ್ ಕಡೆ ದಾರಿ ತೋರಿಸಿದರು.
ಟಾಸ್ ಗೆದ್ದ ನಾಯಕ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. 56 ಟೆಸ್ಟ್'ಗಳ ನಂತರ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದ ಅಭಿನವ್ ಮುಕುಂದ್ ಮೂರನೆ ಓವರ್'ನಲ್ಲಿಯೇ ಸ್ಟಾರ್ಕ' ಬೌಲಿಂಗ್'ನಲ್ಲಿ ಎಲ್'ಬಿ ಬಲೆಗೆ ಬಿದ್ದರು.ನಂತರ ಬಂದ ಚೇತೇಶ್ವರ ಪೂಜಾರ, ನಾಯಕ ಕೊಹ್ಲಿ, ರಹಾನೆ 20ರ ಗಡಿ ದಾಟದೆ ಲಯಾನ್'ಗೆ ವಿಕೇಟ್ ಒಪ್ಪಿಸಿದರು. ಕನ್ನಡಿಗ ರಾಹುಲ್ ಮಾತ್ರ ಗಟ್ಟಿಗನಾಗಿ ಆಟವಾಡುತ್ತಿದ್ದರು.
4 ವಿಕೇಟ್ ನಂತರ ಬ್ಯಾಟಿಂಗ್ ಬಂದ ಮತ್ತೊಬ್ಬ ಕನ್ನಡಿಗ ಕರುಣ್ ನಾಯರ್ ಕೂಡ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳದೆ 26 ರನ್'ಗೆ ಕೀಫೆಗೆ ವಿಕೇಟ್ ಒಪ್ಪಿಸಿದರು.
ಅನಂತರ ಇನ್ನಿಂಗ್ಸ್ ಆರಂಭಿಸಿದ ಅಶ್ವಿನ್,ಸಾಹ, ರವಿಂದ್ರ ಜಡೇಜಾ ಸಾಲುಸಾಲಾಗಿ ಲಯಾನ್ ಬೌಲಿಂಗ್ ಮುಂದೆ ಹೆಚ್ಚು ಹೊತ್ತು ನಿಲ್ಲಲಿಲ್ಲ. ವೇಗದ ಬೌಲರ್ ಇಶಾಂತ್ ಶರ್ಮಾ ಶೂನ್ಯಕ್ಕೆ ನಿರ್ಗಮಿಸಿದರು. ಆದರೆ ಕೊನೆಯವರೆಗೂ ಉಳಿದಿದ್ದು ಮಾತ್ರ ಕರ್ನಾಟಕದ ಆಟಗಾರ ಕೆ.ಎಲ್. ರಾಹುಲ್ ಮಾತ್ರ. ಅಂತಿಮವಾಗಿ 90 ರನ್ ಗಳಿಸಿದ್ದಾಗ ಲಯಾನ್ ಬೌಲಿಂಗ್'ನಲ್ಲಿ ಅವರು ಔಟಾದರು.
ಇಡೀ ಟೀಂ ಇಂಡಿಯಾವನ್ನು ಕಾಡಿದ ಲಯಾನ್ 50 ರನ್'ಗಳಿಗೆ 8 ವಿಕೇಟ್ ಪಡೆದು ಅತ್ಯುತ್ತಮ ಬೌಲರ್ ಎನಿಸಿದರು.
ಬಳಿಕ, ಮೊದಲ ಇನ್ನಿಂಗ್ಸ್ ಆಟ ಪ್ರಾರಂಭಿಸಿದ ಆಸ್ಟ್ರೇಲಿಯಾ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 40 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿದೆ.
ಸ್ಕೋರ್
ಭಾರತ 189/10 (71.2)
ಕೆ.ಎಲ್. ರಾಹುಲ್ :90, ನಾಥನ್ ಲಯಾನ್ 50/8
ಆಸ್ಟ್ರೇಲಿಯಾ 40/0(16)
