ಪ್ರವಾಸೋದ್ಯಮ ಇಲಾಖೆ ಬಳಿ ಉದ್ಯಾನವನ ನಿರ್ವಹಣೆಗೆ ಪ್ರತ್ಯೇಕ ಅನುದಾನ ಇಲ್ಲದಿರುವುದಕ್ಕೆ ನಗರದಲ್ಲಿರುವ ಸುಂದರವಾದ ಲುಂಬಿನಿ ಉದ್ಯಾನವನ ಸಮರ್ಪಕ ನಿರ್ವಹಣೆ ಇಲ್ಲದೆ ಬಳಲುತ್ತ-ಕುಂಟುತ್ತ ಎರಡು ವರ್ಷ ಪೂರೈಸಿದೆ.

ಯಾದಗಿರಿ(ನ.21): ಪ್ರವಾಸೋದ್ಯಮ ಇಲಾಖೆ ಬಳಿ ಉದ್ಯಾನವನ ನಿರ್ವಹಣೆಗೆ ಪ್ರತ್ಯೇಕ ಅನುದಾನ ಇಲ್ಲದಿರುವುದಕ್ಕೆ ನಗರದಲ್ಲಿರುವ ಸುಂದರವಾದ ಲುಂಬಿನಿ ಉದ್ಯಾನವನ ಸಮರ್ಪಕ ನಿರ್ವಹಣೆ ಇಲ್ಲದೆ ಬಳಲುತ್ತ-ಕುಂಟುತ್ತ ಎರಡು ವರ್ಷ ಪೂರೈಸಿದೆ. ರಾಜ್ಯ ಸರ್ಕಾರವು ಪ್ರವಾಸೋದ್ಯಮ ಇಲಾಖೆಯ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಡಿ ಕಳೆದ 2015ರಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ₹1 ಕೋಟಿ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ₹3 ಕೋಟಿ ಖರ್ಚು ಮಾಡಿ ನಗರದಲ್ಲಿ ಲುಂಬಿನಿ ಉದ್ಯಾನವನ ಉದ್ಘಾಟಿಸಲಾಗಿದೆ. ನ.22ಕ್ಕೆ ಉದ್ಯಾನವನ ಆರಂಭಗೊಂಡು 2 ವರ್ಷ ಪೂರ್ಣಗೊಳ್ಳುತ್ತಿದೆ. ಎರಡನೇ ವರ್ಷದ ಸಂಭ್ರಮ ಆಚರಣೆ ಸಹ ವಿವಿಧ ಇಲಾಖೆ ಮತ್ತು ದಾನಿಗಳ ಸಹಾಯಧನದಿಂದ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಪ್ರವಾಸೋದ್ಯಮ ಇಲಾಖೆ ಉದ್ಯಾನವನದ ಪ್ರವಾಸಿಗರ ಟಿಕೇಟ್‌ನಿಂದ ಬಂದ್ ಆದಾಯದಿಂದ ನಿರ್ವಹಣೆ ಮಾಡಿಕೊಂಡು ಬರುತ್ತಿದೆ. ಟಿಕೇಟ್ ಮಾರಾಟದಿಂದ ಉದ್ಯಾನವನದಿಂದ ಪ್ರತಿ ತಿಂಗಳು ₹40ರಿಂದ ₹50 ಸಾವಿರ ಆದಾಯ ಬರುತ್ತಿದ್ದು, ಪ್ರತಿ ತಿಂಗಳು ₹10ರಿಂದ ₹11 ಸಾವಿರ ಉದ್ಯಾನವನದ ವಿದ್ಯುತ್ ಬಿಲ್ ಬರುತ್ತದೆ.

ಹೊರ ಗುತ್ತಿಗೆಯಿಂದ ಕೆಲಸ ಮಾಡುವ 11 ಸಿಬ್ಬಂದಿಗೆ ₹45ರಿಂದ ₹50 ಸಾವಿರ ಮತ್ತು ಉದ್ಯಾನವನಹುಲ್ಲಿನ ಹಾಸಿಗೆ ಮತ್ತು ಗಿಡಗಳನ್ನು ಪ್ರೆಟ್ರೋಲ್ ಆಧಾರಿತ ಯಂತ್ರದಿಂದ ಸಮತಟ್ಟು ಮಾಡುವುದು ಸೇರಿದಂತೆ ಇತರ ನಿರ್ವಹಣೆಗೆ ಪ್ರತಿ ತಿಂಗಳು ₹5ರಿಂದ ₹6 ಸಾವಿರ ಖರ್ಚು ಹೀಗೆ ಉದ್ಯಾನವನ ನಿರ್ವಹಣೆಗೆ ಒಟ್ಟು ₹60ರಿಂದ ₹70 ಸಾವಿರ ಖರ್ಚಾಗುತ್ತಿದೆ. ಆದರೆ, ಆದಾಯ ಮಾತ್ರ ಕೇವಲ ₹40ರಿಂದ ₹50 ಸಾವಿರ ಬರುತ್ತಿರುವುದರಿಂದ ಕೆಲವು ತಿಂಗಳು ಕಾಲ ಸಿಬ್ಬಂದಿ ಸಂಬಳ ತಡೆ ಹಿಡಿಯುವುದು ಇಲ್ಲವೇ, ವಿದ್ಯುತ್ ಬಿಲ್ ಪಾವತಿ ಮಾಡಿ ಸಂಕಷ್ಟದಲ್ಲಿಯೇ ಉದ್ಯಾನವನ ನಿರ್ವಹಣೆ ಮಾಡಲಾಗುತ್ತಿದೆ.

ಉದ್ಯಾನವನದ ಮಧ್ಯದಲ್ಲಿರುವ ಸಣ್ಣ ಕೆರೆಯ ಸುತ್ತಲು ದಟ್ಟವಾಗಿ ಜಾಲಿ ಬೆಳೆದಿದೆ. ಕೆರೆಯ ಹೂಳೆತ್ತದೇ ಇರುವುದರಿಂದ ಕಲುಷಿತಗೊಂಡ ನೀರಿನಿಂದ ಸೊಳ್ಳೆಗಳ ಉತ್ಪತ್ತಿ ಅಧಿಕಗೊಂಡು ಉದ್ಯಾನವನಲ್ಲಿ ಸಾರ್ವಜನಿಕರು ಕುಳಿತುಕೊಳ್ಳದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಆಟಿಕೆಗಳು ಮುರಿದು ಬಿದ್ದಿವೆ. ವಾಯು ವಿಹಾರಗಳಿಗೆ ಮತ್ತು ಸಾರ್ವಜನಿಕರ ಗಮನ ಸೆಳೆಯುತ್ತಿರುವ ನಗರದ ಲುಂಬಿನಿ ಸಾರ್ವಜನಿಕ ಉದ್ಯಾನವನ ಸಮರ್ಪಕ ನಿರ್ವಹಣೆ ಇಲ್ಲದಿರುವುದರಿಂದ ಪ್ರವಾಸಿಗರ ಹಿಡಿಶಾಪಕ್ಕೆ ಗುರಿಯಾಗುತ್ತಿದೆ. ಪ್ರವಾಸೋದ್ಯಮ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಈ ಸಮಸ್ಯೆ ಬಗೆಹರಿಸಬೇಕಾಗಿರುವುದು ಜರೂರಿ ಇದೆ.