ಮುಂಬೈ[ಅ.30]: ಹತ್ತು ವರ್ಷಗಳ ಹಿಂದೆ ಮಾಲೆಗಾಂವ್ ನಲ್ಲಿ ಬಾಂಬ್ ಸ್ಫೋಟದಲ್ಲಿ 10 ಜನರ ಸಾವಿಗೆ ಕಾರಣರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ನ್ಯಾಯಾಲಯ [ಎನ್ ಐಎ]  ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ 7 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿ ತನಿಖೆ ನಡೆಸಬೇಕೆಂದು ಆದೇಶಿಸಿದೆ.

ತಪ್ಪಿತಸ್ಥ 7 ಮಂದಿ ಮಲೆಗಾವ್ ಸ್ಫೋಟದಲ್ಲಿ ಭಾಗಿಯಾಗಿದ್ದು ಈ ಘಟನೆಯಲ್ಲಿ 10 ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡಿದ್ದರು. ಜೊತೆಗೆ ಕೋಟ್ಯಂತರ ಆಸ್ತಿ ನಷ್ಟವಾಗಿತ್ತು ಎಂದು ಎನ್ ಐಎ ನ್ಯಾಯಾಧೀಶರಾದ ವಿನೋದ್ ಪದಾಲ್ಕರ್ ತಿಳಿಸಿದ್ದಾರೆ.

ಇವರೆಲ್ಲರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ (ಯುಎಪಿಎ) ಮತ್ತು ವಿವಿಧ ಐಪಿಸಿ ಸೆಕ್ಷನ್ ಗಳಡಿ ದೋಷಾರೋಪವನ್ನು ರದ್ದುಗೊಳಿಸಲು ನಿರಾಕರಿಸಿದೆ. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 1, 2018 ರಂದು ನಡೆಯುವ ಸಾಧ್ಯತೆಯಿದೆ.
 
ಪುರೋಹಿತ್ ಮತ್ತು ಸಾಧ್ವಿ ಅವರಲ್ಲದೆ ಮೇಜರ್(ನಿವೃತ್ತ)ರಮೇಶ್ ಉಪಾಧ್ಯಾಯ, ಅಜಯ್ ರಹೀರ್ಕರ್, ಸುಧಾಕರ್ ದ್ವಿವೇದಿ, ಸುಧಕರ್ ಚತುರ್ವೇದಿ ಮತ್ತು ಸಮೀರ್ ಕುಲಕರ್ಣಿ ಅವರುಗಳು ಮಾಲೆಗಾಂವ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಸಿಲುಕಿದ್ದಾರೆ.  2008 ರ ಸೆ.29 ರಂದು ಉತ್ತರ ಮಹಾರಾಷ್ಟ್ರದ ಮಾಲೆಗಾಂವ್ ನ ಮಸೀದಿ ಬಳಿ ಸ್ಪೋಟ ಸಂಭವಿಸಿತ್ತು.