ತಾಯಿ ಸತ್ತಿದ್ದಕ್ಕೆ ಹೆದರಿ ಪ್ರೇಮಿಗಳು ಆತ್ಮಹತ್ಯೆ

First Published 15, Jan 2018, 8:05 AM IST
Lovers Suicide In Bengaluru
Highlights

ಪ್ರೇಮಿಗಳಿಬ್ಬರು ಜೊತೆಗೂಡುವುದಕ್ಕೆ ಕುಟುಂಬ ಅಡ್ಡಿಯಾಗುತ್ತದೆ. ಸೋ, ಪ್ರೇಮಿಗಳು ಪರಾರಿಯಾ ಗುತ್ತಾರೆ. ವಿಷಯ ತಿಳಿದ ಹುಡುಗಿಯ ತಾಯಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದು ಪರಾರಿಯಾದ ಪ್ರೇಮಿಗಳಿಗೆ ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಇಬ್ಬರೂ ಒಟ್ಟಿಗೆ ನೇಣಿಗೆ ಕೊರಳೊಡ್ಡುತ್ತಾರೆ. ಇಂತಹ ಮನಕಲುಕುವ ಘಟನೆಯೊಂದು ಬೆಂಗಳೂರು ಹೊರವಲಯದ ಕಗ್ಗಲೀಪುರದ ನಾಲ್ಕಂಭ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

ಬೆಂಗಳೂರು (ಜ.15): ಪ್ರೇಮಿಗಳಿಬ್ಬರು ಜೊತೆಗೂಡುವುದಕ್ಕೆ ಕುಟುಂಬ ಅಡ್ಡಿಯಾಗುತ್ತದೆ. ಸೋ, ಪ್ರೇಮಿಗಳು ಪರಾರಿಯಾ ಗುತ್ತಾರೆ. ವಿಷಯ ತಿಳಿದ ಹುಡುಗಿಯ ತಾಯಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದು ಪರಾರಿಯಾದ ಪ್ರೇಮಿಗಳಿಗೆ ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಇಬ್ಬರೂ ಒಟ್ಟಿಗೆ ನೇಣಿಗೆ ಕೊರಳೊಡ್ಡುತ್ತಾರೆ. ಇಂತಹ ಮನಕಲುಕುವ ಘಟನೆಯೊಂದು ಬೆಂಗಳೂರು ಹೊರವಲಯದ ಕಗ್ಗಲೀಪುರದ ನಾಲ್ಕಂಭ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ವೇಣುಗೋಪಾಲ್ (26) ಮತ್ತು ಈತನ ಪ್ರೇಯಸಿ ದಿವ್ಯಾ (22) ಹಾಗೂ ಯುವತಿಯ ತಾಯಿ ಶಾಂತಮ್ಮ ಆತ್ಮಹತ್ಯೆ ಮಾಡಿಕೊಂಡವರು. ದಿವ್ಯಾ ಸ್ಥಳೀಯ ಅನುದಾನಿತ ಶಾಲೆಯಲ್ಲಿ ಶಿಕ್ಷಕಿ ಯಾಗಿದ್ದರೆ, ವೇಣುಗೋಪಾಲ್ ಹಳೆ ಊರು ಗ್ರಾ.ಪಂ. ಬಿಲ್ ಕಲೆಕ್ಟರ್ ಆಗಿದ್ದರು. ಒಂದೇ ಊರಿನವರಾದ ಇಬ್ಬರು ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಯ ವಿಚಾರ ಎರಡು ಕುಟುಂಬಗಳಿಗೆ ತಿಳಿದು, ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು.

ಪೋಷಕರ ತೀವ್ರ ವಿರೋಧದಿಂದ ನೊಂದಿದ್ದ ಪ್ರೇಮಿಗಳು ಮನೆ ಬಿಟ್ಟು ಓಡಿ ಹೋಗಲು ನಿರ್ಧರಿಸಿದ್ದರು. ಅದರಂತೆ ವೇಣುಗೋಪಾಲ್ ಮತ್ತು ದಿವ್ಯಾ ಶನಿವಾರ ಮನೆ ಬಿಟ್ಟು ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿಗೆ ಬಂದ ಬಳಿಕ ವೇಣುಗೋಪಾಲ್ ಕಗ್ಗಲೀಪುರದಲ್ಲಿರುವ ಸ್ನೇಹಿತ ಶ್ರೀಧರ್‌ಗೆ ಕರೆ ಮಾಡಿ ಒಂದು ರಾತ್ರಿ ಮಟ್ಟಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡುವಂತೆ ಸಹಾಯ ಕೇಳಿದ್ದರು. ಈ ವೇಳೆ ವೇಣು ಗೋಪಾಲ್ ಪ್ರೇಯಸಿ ದಿವ್ಯಾ ಜತೆಗಿರುವ ವಿಚಾರವನ್ನು ಸ್ನೇಹಿತನಿಗೆ ಹೇಳಿರಲಿಲ್ಲ. ವೇಣುಗೋಪಾಲ್ ಒಬ್ಬನೇ ಬಂದಿರಬಹುದೆಂದುಕೊಂಡು ತಾನು ವಾಸವಿದ್ದ ಅಕ್ಕನ ಮನೆಯ ವಿಳಾಸವನ್ನು ಶ್ರೀಧರ್ ನೀಡಿದ್ದ.  ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಪ್ರೇಮಿಗಳಿಬ್ಬರು ಶ್ರೀಧರ್ ಅವರ ಅಕ್ಕನ ಮನೆ ಬಳಿ ತೆರಳಿದ್ದರು.

ಸ್ನೇಹಿತನ ಜತೆ ದಿವ್ಯಾ ಇರುವುದನ್ನು ಕಂಡು ಶ್ರೀಧರ್ ಅಚ್ಚರಿ ವ್ಯಕ್ತಪಡಿಸಿದ್ದ. ಮನೆಯಲ್ಲಿ ಉಳಿದುಕೊಳ್ಳಲು ಶ್ರೀಧರನ ಅಕ್ಕ ಅವಕಾಶ ನೀಡಲು ನಿರಾಕರಿಸಿದ್ದರು. ದಿವ್ಯಾ ಒಬ್ಬಳಿಗೆ ಮಾತ್ರ ಉಳಿದುಕೊಳ್ಳಲು ಅವಕಾಶ ಕೊಡಿ ಎಂದು ವೇಣುಗೋಪಾಲ್ ಮನವಿ ಮಾಡಿ ಕೊಂಡಿದ್ದ. ನಂತರ ದಿವ್ಯಾಗೆ ಕೊಠಡಿಯೊಂದರಲ್ಲಿಮಲಗಲು ಶ್ರೀಧರನ ಅಕ್ಕ ಅನುಮತಿ ನೀಡಿದ್ದರು. ವೇಣುಗೋಪಾಲ್ ಮನೆ ಹೊರಾಂಗಣದಲ್ಲಿ ಮಲಗಿದ್ದ.

ಬುದ್ಧಿ ಹೇಳಿದ್ದರು: ಭಾನುವಾರ ಬೆಳಗ್ಗೆ ಆರು ಗಂಟೆ ಸುಮಾರಿಗೆ ಶ್ರೀಧರನ ಭಾವ ಅಶ್ವತ್ಥ ಅವರು ವೇಣುಗೋಪಾಲ್ ಜತೆ ಮಾತನಾಡಿ, ‘ಇಬ್ಬರು ಊರಿಗೆ ಹೋಗಿ ಹಿರಿಯರೊಂದಿಗೆ ಮಾತನಾಡಿ. ಈ ರೀತಿ ಮನೆ ಬಿಟ್ಟು ಬರುವುದು ಸರಿಯಲ್ಲ’ ಎಂದು ಬುದ್ದಿ ಹೇಳಿ ಕೆಲಸಕ್ಕೆ ಹೋಗಿದ್ದರು. ಅಶ್ವತ್ಥ ಅವರ ಬುದ್ಧಿ ಮಾತು ಕೇಳಿದ ವೇಣುಗೋಪಾಲ್ ಕೂಡಲೇ ಸ್ವಿಚ್ ಆಫ್ ಮಾಡಿದ್ದ ಮೊಬೈಲ್ ಆನ್ ಮಾಡಿ ಸ್ನೇಹಿತನಿಗೆ ಕರೆ ಮಾಡಿದ್ದ. ಈ ವೇಳೆ ಮಗಳು ಮನೆ ಬಿಟ್ಟು ಹೋಗಿದ್ದರಿಂದ ಮಾರ್ಯದೆಗೆ ಅಂಜಿ ದಿವ್ಯಾ ತಾಯಿ ಶಾಂತಮ್ಮ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಸಿದ್ದ.

ಈ ವಿಚಾರ ತಿಳಿದು ಆತಂಕಗೊಂಡ ವೇಣುಗೋಪಾಲ್ ಕೂಡಲೇ ಕೊಠಡಿಯೊಂದರಲ್ಲಿ ನಿದ್ರೆಗೆ ಜಾರಿದ್ದ ದಿವ್ಯಾಳನ್ನು ಎಚ್ಚರಿಸಿ ತಾಯಿ ಆತ್ಮಹತ್ಯೆ ವಿಚಾರ ತಿಳಿಸಿದ್ದ. ನಾವು ಊರಿಗೆ ವಾಪಸ್ ಹೋದರೆ ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿದ ಇಬ್ಬರು ಕೊಠಡಿಯಲ್ಲಿದ್ದ ಸೀರೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು. ಸ್ಥಳಕ್ಕೆ ರಾಮನಗರದ ಉಪವಿಭಾಗದ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

loader