ಎಲಾ ಇವ್ನ! ಒಬ್ಬಳ ಜೊತೆ ನಿಶ್ಚಿತಾರ್ಥ; ಇನ್ನೊಬ್ಬಳ ಜೊತೆ ಸಪ್ತಪದಿ; ಇದೀಗ ಈ ಭೂಪ ಪೊಲೀಸರ ಅತಿಥಿ

First Published 7, Mar 2018, 1:17 PM IST
Love Sex And Dhokha
Highlights

ಸರ್ಕಾರಿ ಎಂಜಿನಿಯರ್ ಒಬ್ಬ ಮದುವೆಯಾಗುವುದಾಗಿ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು, ಊರೆಲ್ಲ ಸುತ್ತಾಡಿಸಿ ದೈಹಿಕ ಸಂಪರ್ಕ ಬೆಳೆಸಿ ನಂತರ ಬೇರೊಬ್ಬ ಯುವತಿಯೊಂದಿಗೆ ಗುಟ್ಟಾಗಿ ಮದುವೆಯಾಗಿ ವಂಚಿಸಿರುವ ಘಟನೆ ನಡೆದಿದೆ. 

ಬೆಂಗಳೂರು (ಮಾ. 07): ಸರ್ಕಾರಿ ಎಂಜಿನಿಯರ್ ಒಬ್ಬ ಮದುವೆಯಾಗುವುದಾಗಿ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು, ಊರೆಲ್ಲ ಸುತ್ತಾಡಿಸಿ ದೈಹಿಕ ಸಂಪರ್ಕ ಬೆಳೆಸಿ ನಂತರ ಬೇರೊಬ್ಬ ಯುವತಿಯೊಂದಿಗೆ ಗುಟ್ಟಾಗಿ ಮದುವೆಯಾಗಿ ವಂಚಿಸಿರುವ ಘಟನೆ ನಡೆದಿದೆ. 

ಇಷ್ಟೆಲ್ಲಾ ಪಾಖಂಡಿ ಕೆಲಸ ಮಾಡಿ ಯುವತಿಯ ಬಾಳು ಹಾಳು ಮಾಡಿದವ ಡಾಕ್ಟರೇಟ್'ನಲ್ಲಿ ಚಿನ್ನದ ಪದಕ ವಿಜೇತ, ಬೆಂಗಳೂರಿನ ಕಾವೇರಿ ಭವನದ ಕೆಪಿಟಿಸಿಎಲ್‍ನಲ್ಲಿ ಇಂಜಿನಿಯರ್ ಆಗಿರುವ, ಬೆಂಗಳೂರು ಕನಕಪುರ ರಸ್ತೆಯ ಪಂಚಮುಖಿ ರೆಸಿಡೆನ್ಸಿ ನಿವಾಸಿ ಡಾ.ಮಾರುತಿ ಪ್ರಸನ್ನ ಎಂಬಾತನೇ ಈ ಕೃತ್ಯ  ಎಸಗಿದ ಭೂಪ. ಈತ ಶಿವಮೊಗ್ಗ ತಾಲ್ಲೂಕಿನ  ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಹಳ್ಳಿಯ ಯುವತಿಯೊಂದಿಗೆ 2017ರ ಫೆಬ್ರವರಿ 15 ರಂದು ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಕುಟುಂಬದಲ್ಲಿ ಕೆಲ ಸಮಸ್ಯೆ ಇರುವುದರಿಂದ ಒಂದು ವರ್ಷದ ಬಳಿಕ ವಿವಾಹ ಆಗುವುದಾಗಿ ತಿಳಿಸಿದ್ದ. ಅದಾದ ಬಳಿಕ ಪಿಜಿಯಲ್ಲಿದ್ದುಕೊಂಡು ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡುತ್ತಿದ್ದ ಈ ಯುವತಿಯನ್ನು ಹಲವು ಸಾರಿ ಭೇಟಿ ಮಾಡಿದ್ದ. ದೂರವಾಣಿ ಸಂಭಾಷಣೆಯನ್ನೂ ನಡೆಸುತ್ತಿದ್ದ. ಅಲ್ಲದೇ ಲಾಡ್ಜ್‌‌ಗೆ  ಕರೆದೊಯ್ದು ತಂಗಿದ್ದ.  ಈ ವೇಳೆ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ ಎನ್ನಲಾಗಿದೆ. ನಿಶ್ಚಿತಾರ್ಥ ಆಗಿದ್ದರಿಂದ ಯುವತಿ ಕೂಡ ಈತನನ್ನು ನಂಬಿ ಮೋಸಹೋಗಿದ್ದಳು. ಆದರೆ, ಕಳೆದ ಮೂರ್ನಾಲ್ಕು ತಿಂಗಳಿನಿಂದ ಈಚೆಗೆ ಯುವಕನ ವರ್ತನೆ ಬದಲಾಗಿತ್ತು. ದೂರವಾಣಿ ಕರೆಯನ್ನೂ ಸರಿಯಾಗಿ ಸ್ವೀಕರಿಸುತ್ತಿರಲಿಲ್ಲ. ಡಿಸೆಂಬರ್ 17 ರಂದು ಯುವತಿ ಬೆಂಗಳೂರಿಗೆ ಪರೀಕ್ಷೆ ಬರೆಯಲು ಹೋಗಿದ್ದಾಗ ಕಾವೇರಿ ಭವನಕ್ಕೆ ತೆರಳಿದ್ದಾರೆ. ಆಗ ಇಂಜಿನಿಯರ್ ಒಂದು ತಿಂಗಳ ರಜೆಯಲ್ಲಿದ್ದಾನೆ ಎಂಬ  ಮಾಹಿತಿ ದೊರೆತಿದೆ. ಕೊನೆಗೆ ಹಲವು ಕಡೆಗಳಲ್ಲಿ ವಿಚಾರಿಸಿದಾಗ ಡಾ.ಮಾರುತಿ ಪ್ರಸನ್ನ 2017ರ ಡಿಸೆಂಬರ್ 3 ರಂದು ಚಿತ್ರದುರ್ಗ ಮೂಲದ ಯುವತಿಯೊಂದಿಗೆ ವಿವಾಹ ಆಗಿರುವುದು ಪತ್ತೆಯಾಗಿದೆ. ಇದು ಯುವತಿ ಕುಟುಂಬದವರಿಗೆ ಆಘಾತ ತಂದಿದೆ. 

ಇಂಜಿನಿಯರ್ ಮಹಾಶಯ ವಂಚಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಯುವತಿ ಮಹಿಳಾ ಠಾಣೆಯಲ್ಲಿ ವಂಚನೆ, ಅತ್ಯಾಚಾರದ ದೂರು ದಾಖಲಿಸಿದ್ದಾರೆ. ವಿಚಾರಣೆಗೆಂದು ಆರೋಪಿಗೆ ಕರೆ ಮಾಡಿದರೆ ಬೇರೆ ರಾಜ್ಯದಲ್ಲಿರುವುದಾಗಿ ಸುಳ್ಳು ಹೇಳಿ ಚಳ್ಳೆಹಣ್ಣು ತಿನ್ನಿಸಿದ್ದಾನೆ. ನಂತರ ಮೊಬೈಲ್ ಕರೆ ಆಧರಿಸಿ ಬೆಂಗಳೂರಿನಲ್ಲಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಮಹಿಳಾ ಆಯೋಗಕ್ಕೆ ಕೂಡ ದೂರು ಸಲ್ಲಿಸಲಾಗಿದೆ. ಆದರೆ ಪೋಲಿಸರು ಮಾತ್ರ ನೊಂದ ಯುವತಿಯ ಪರವಾಗಿರುವುದನ್ನು ಬಿಟ್ಟು ಇಂಜಿನಿಯರ್ ಕಾಂಚಾಣಕ್ಕೆ ಬಲಿಯಾಗಿ ಕೇಸ್ ಹಳ್ಳ ಹಿಡಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡ ತೊಡಗಿದ್ದಾರೆ. 

loader