ಲವ್, ಸೆಕ್ಸ್ , ದೋಖಾ : ಕೊನೆಗೆ ಆಗಿದ್ದು ಸಾವು
ಅವರಿಬ್ಬರ ನಡುವೆ ಮೊದಲು ದೇಹಾಕರ್ಷಣೆ ಆಯ್ತು. ನಂತರ ಪ್ರೀತಿ ಹೆಸರಿನಲ್ಲಿ ಒಂದಷ್ಟು ದಿನಗಳ ಕಾಲ ಸಂಬಂಧ ಮುಂದುವರಿಯಿತು. ಇಬ್ಬರ ನಡುವೆ ದೈಹಿಕ ಸಂಬಂಧವೂ ಏರ್ಪಟ್ಟಿತು. ಕೊನೆಗೆ ಆಗಿದ್ದು ಮಾತ್ರ ಸಾವು.
ಬೆಂಗಳೂರು : ಮದುವೆ ಆಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ ಪ್ರಿಯಕರ ವಿರುದ್ಧ ದೂರು ದಾಖಲಿಸಿದರೂ ಪೊಲೀಸರು ಬಂಧಿಸಲಿಲ್ಲ ಎಂದು ಬೇಸರಗೊಂಡು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಂದ್ರಾಲೇಔಟ್ ಸಮೀಪದ ಬೈರವೇಶ್ವರ ನಗರದಲ್ಲಿ ಶುಕ್ರವಾರ ನಡೆದಿದೆ.
ಇಲ್ಲಿನ ನಿವಾಸಿ ಡಿ.ಕೆ.ಮಂಜುಳಾ (23 ) ಮೃತ ದುರ್ದೈವಿ. ತಮ್ಮ ಮನೆಯಲ್ಲಿ ಮಧ್ಯಾಹ್ನ ನೇಣು ಬಿಗಿದುಕೊಂಡು ಮಂಜುಳಾ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣವೇ ಆಕೆಯನ್ನು ಕುಟುಂಬದವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದರು. ಆದರೆ ಅಷ್ಟರಲ್ಲಿ ತೀವ್ರ ಅಸ್ವಸ್ಥರಾಗಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ಮಂಜುಳಾ ಮಾಗಡಿ ತಾಲೂಕಿನ ದೊರೆಸ್ವಾಮಿಪಾಳ್ಯದವರು.ರಾಜರಾಜೇಶ್ವರಿ ನಗರದ ರಿಲೆಯನ್ಸ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಭೈರವೇಶ್ವರ ನಗರದಲ್ಲಿರುವ ತಮ್ಮ ಚಿಕ್ಕಮ್ಮ ಮನೆ ಯಲ್ಲಿ ನೆಲೆಸಿದ್ದರು. ಕೆಲ ವರ್ಷಗಳ ಹಿಂದೆ ಅವರಿಗೆ ಸಂಬಂಧಿಕರ ಯುವಕನ ಜತೆ ವಿವಾಹವಾಗಿತ್ತು. ಆದರೆ ವಿವಾಹವಾದ ಕೆಲವೇ ದಿನಗಳಲ್ಲಿ ಕೌಟುಂಬಿಕ ವಿಚಾರಗಳಿಗೆ ದಂಪತಿ ಪ್ರತ್ಯೇಕವಾಗಿದ್ದರು. ಇದಾದ ನಂತರ ತಮ್ಮೂರಿನ ಪಕ್ಕದ ಹಳ್ಳಿಯ ಹೊಸಪಾಳ್ಯದ ರವಿಕಿರಣ್ ಎಂಬುವನ ಜತೆ ಅವರಿಗೆ ಪ್ರೇಮವಾಯಿತು. ಬಸವೇಶ್ವರ ನಗರದ ಖಾಸಗಿ ಕಂಪನಿಯಲ್ಲಿ ರವಿಕಿರಣ್ ಉದ್ಯೋಗದಲ್ಲಿದ್ದಾನೆ.
ಈ ಪ್ರೇಮದ ಸಲುಗೆಯಲ್ಲಿ ಮದುವೆ ಆಗುವುದಾಗಿ ನಂಬಿಸಿ ಮಂಜುಳಾ ಜತೆ ರವಿಕಿರಣ್ ದೇಹ ಸಂಪರ್ಕ ನಡೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಇತ್ತೀಚಿಗೆ ತನ್ನಿಂದ ದೂರವಾಗಲು ಯತ್ನಿಸುತ್ತಿದ್ದ ಇನಿಯನ ಮೇಲೆ ಮಂಜುಳಾ ಬೇಸರಗೊಂಡಿದ್ದರು. ಇದೇ ವಿಚಾರವಾಗಿ ಆತನನ್ನು ಭೇಟಿಯಾಗಿ ಮನವೊಲಿಸಲು ಪ್ರಯತ್ನಿಸಿದರೂ ಫಲ ಸಿಗಲಿಲ್ಲ. ಈ ಪ್ರೇಮ ವಿಚಾರವು ಎರಡು ಕುಟುಂಬಗಳಿಗೆ ಗೊತ್ತಿತ್ತು.
ಮೊದಮೊದಲು ಮದುವೆ ಆಗುವುದಾಗಿ ಹೇಳುತ್ತಿದ್ದ ರವಿಕಿರಣ್, ಲೈಂಗಿಕವಾಗಿ ಬಳಸಿಕೊಂಡ ನಂತರ ತನ್ನ ಮಾತು ಬದಲಾಯಿಸುತ್ತಿದ್ದ. ಇದರಿಂದ ನೊಂದ ಮಂಜುಳಾ, ವಾರದ ಹಿಂದೆ ಚಂದ್ರಾಲೇಔಟ್ ಠಾಣೆಯಲ್ಲಿ ರವಿಕಿರಣ್ ವಿರುದ್ಧ ಅತ್ಯಾಚಾರ ಹಾಗೂ ವಂಚನೆ ಆರೋಪದಡಿ ದೂರು ದಾಖಲಿಸಿದ್ದರು ಎಂದು ಮೂಲಗಳು ಹೇಳಿವೆ.
ಇನ್ಸ್ಪೆಕ್ಟರ್ ವಿರುದ್ಧ ಸಂಬಂಧಿಕರ ಆಕ್ರೋಶ
ಈ ಘಟನೆಯಿಂದ ಕೆರಳಿದ ಮೃತನ ಮಂಜುಳಾ ಕುಟುಂಬದವರು, ಚಂದ್ರಾ ಲೇಔಟ್ ಇನ್ಸ್‌ಪೆಕ್ಟರ್ ವೀರೇಂದ್ರ ಪ್ರಸಾದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಮಗಳು ದೂರು ನೀಡಿದ ದಿನವೇ ಆರೋಪಿಯನ್ನು ಬಂಧಿಸಿದ್ದರೆ ಆಕೆ ಬದುಕುಳಿಯುತ್ತಿದ್ದಳು. ನೀವೇ ಅವಳ ಸಾವಿಗೆ ಕಾರಣ ಎಂದು ಕಿಡಿಕಾರಿದರು.
ಡೆತ್ ನೋಟ್‌ನಲ್ಲೇನಿದೆ?
ಮೃತ ಮಂಜುಳಾ ಮನೆಯಲ್ಲಿ ಮರಣ ಪತ್ರ ಪತ್ತೆಯಾಗಿದ್ದು, ಇದರಲ್ಲಿ ತಮ್ಮ ಪ್ರೇಮದ ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ತಿಳಿದು ಬಂದಿದೆ. ‘ನನ್ನನ್ನು ಮದುವೆ ಆಗುವುದಾಗಿ ನಂಬಿಸಿ ರವಿಕಿರಣ್ ವಂಚಿಸಿದ. ಆತನ ಮೇಲೆ ದೂರು ದಾಖಲಿಸಿದರೂ ನೀವು (ಪೊಲೀಸರು) ಬಂಧಿಸಲಿಲ್ಲ. ಈಗ ನಾನು ಸಾಯುತ್ತಿದ್ದೇನೆ. ಇನ್ನಾದರೂ ಆತನನ್ನು ಬಂಧಿಸಿ ಕಾನೂನು ಪ್ರಕಾರ ಆತನಿಗೆ ಶಿಕ್ಷೆ ವಿಧಿಸುವಂತೆ ಕೋರುತ್ತೇನೆ’ ಎಂದು ಇನ್ಸ್‌ಪೆಕ್ಟರ್ ಅವರಿಗೆ ಮಂಜುಳಾ ಡೆತ್‌ನೋಟ್‌ನಲ್ಲಿ ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ.