ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ (ಎನ್’ಐಎ) ವಾದವನ್ನು ತಿರಸ್ಕರಿಸಿರುವ ಕೇರಳ ಸರ್ಕಾರವು, ಪೊಲೀಸರು ನಡೆಸಿರುವ ತನಿಖೆಯಿಂದ ಅಂತಹ ಯಾವುದೇ ಅಂಶಗಳು  ಕಂಡುಬಂದಿಲ್ಲವೆಂದು ಹೇಳಿದೆ.

ನವದೆಹಲಿ: ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ (ಎನ್’ಐಎ) ವಾದವನ್ನು ತಿರಸ್ಕರಿಸಿರುವ ಕೇರಳ ಸರ್ಕಾರವು, ಪೊಲೀಸರು ನಡೆಸಿರುವ ತನಿಖೆಯಿಂದ ಅಂತಹ ಯಾವುದೇ ಅಂಶಗಳು ಕಂಡುಬಂದಿಲ್ಲವೆಂದು ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇರಳ ಪೊಲೀಸರು ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ. ಆದರೆ ಪ್ರಕರಣವನ್ನು ಎನ್’ಐಎಗೆ ವಹಿಸಬಹುದಾದಂತಹ ಯಾವುದೇ ಅಂಶಗಳು ತನಿಖೆಯಲ್ಲಿ ಕಂಡುಬಂದಿಲ್ಲ ಎಂದು ಸುಪ್ರೀಂ ಕೋರ್ಟ್’ಗೆ ಸಲ್ಲಿಸಿರುವ ಅಫಿಡಾವಿಟ್’ನಲ್ಲಿ ಕೇರಳ ಸರ್ಕಾರವು ಹೇಳಿದೆ.

ಕಳೆದ ಆ.16 ರಂದು ‘ಲವ್ ಜಿಹಾದ್’ ಪ್ರಕರಣವನ್ನು ಎನ್’ಐಎ’ಗೆ ವರ್ಗಾಯಿಸುವಂತೆ ಸುಪ್ರಿಂ ಕೋರ್ಟ್ ಸೂಚಿಸಿತ್ತು.

ಕಳೆದ ಅ.03ರಂದು, 'ಲವ್ ಜಿಹಾದ್' ಆರೋಪದ ಪ್ರಕರಣದಲ್ಲಿ ಮುಸ್ಲಿಮ್ ವ್ಯಕ್ತಿಯನ್ನು ಮದುವೆಯಾಗಿದ್ದ ಹಿಂದೂ ಯುವತಿಯ ವಿವಾಹವನ್ನ ಅಮಾನ್ಯಗೊಳಿಸಿದ್ದ ಕೇರಳ ಹೈಕೋರ್ಟ್'ನ ತೀರ್ಪನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು.

ವಯಸ್ಸಿಗೆ ಬಂದ ಹುಡುಗಿ ತನ್ನಿಚ್ಛೆಯಂತೆ ವಿವಾಹವಾದರೆ ಅದನ್ನು ತಡೆಯಲು ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಹೈಕೋರ್ಟ್'ಗೂ ಕೂಡ ಈ ವಿವಾಹವನ್ನು ಅಮಾನ್ಯಗೊಳಿಸುವ ಅಧಿಕಾರವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

25 ವರ್ಷದ ಹಾದಿಯಾಳ ವಿವಾಹವನ್ನು ಅಮಾನ್ಯಗೊಳಿಸಿ ಆಕೆಯನ್ನು ಹಿಂದೂ ಪೋಷಕರ ಸುಪರ್ದಿಗೆ ಒಪ್ಪಿಸಿ ಕೇರಳ ಹೈಕೋರ್ಟ್ ಆದೇಶ ಹೊರಡಿಸಿತ್ತು. ಹಾದಿಯಾ ಪತಿ ಶೆಫಿನ್ ಜಹಾನ್ ಅವರು ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ತನ್ನ ಪತ್ನಿಯನ್ನು ಆಕೆಯ ಪೋಷಕರು ಬಲವಂತವಾಗಿ ಹಿಡಿದಿಟ್ಟುಕೊಂಡಿದ್ದಾರೆ ಎಂದೂ ಶೆಫಿನ್ ದೂರಿದ್ದರು.

ಏನಿದು ಪ್ರಕರಣ?
ಹೋಮಿಯೋಪಥಿ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಹಿಂದೂ ಹುಡುಗಿ ಹಾದಿಯಾ ಅವರು ಶೆಫಿನ್ ಜಹಾನ್'ರನ್ನು ಪ್ರೀತಿಸುತ್ತಾರೆ. ಇಸ್ಲಾಮ್'ಗೆ ಮತಾಂತರಗೊಂಡು ಶೆಫಿನ್'ರನ್ನ ವಿವಾಹವಾಗುತ್ತಾರೆ. ಆದರೆ, ಹಾದಿಯಾಳ ಪೋಷಕರು ಇದೊಂದು ಲವ್ ಜಿಹಾದ್ ಕೇಸ್ ಎಂದು ಆರೋಪಿಸಿದ್ದಾರೆ. ತನ್ನ ಮಗಳ ಬ್ರೈನ್ ವಾಶ್ ಮಾಡಲಾಗಿದೆ. ಇಸ್ಲಾಮ್'ಗೆ ಮತಾಂತರ ಮಾಡುವ ವ್ಯವಸ್ಥಿತ ಪಿತೂರಿಗೆ ತನ್ನ ಮಗಳು ಬಲಿಯಾಗಿದ್ದಾಳೆ ಎಂದು ಹಾದಿಯಾಳ ತಂದೆ ಆರೋಪಿಸಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗ ಕೋರ್ಟ್ ಹಾದಿಯಾಳ ವಿವಾಹವನ್ನು ಅಮಾನ್ಯಗೊಳಿಸಿ ಆಕೆಯ ಪೋಷಕರ ಸುಪರ್ದಿಗೆ ಒಪ್ಪಿಸಿತ್ತು.