ನವದೆಹಲಿ[ಮಾ.11]: 2019ರ ಲೋಕಸಭಾ ಚುನಾವಣೆಯಲ್ಲಿ 75 ವರ್ಷ ಮೀರಿದವರಿಗೆ ಟಿಕೆಟ್‌ ಇಲ್ಲ ಎಂಬುದು ಕೇವಲ ಊಹಾಪೋಹ ಎಂದು ಹೇಳಲಾಗಿದ್ದು, ‘ವಯಸ್ಸು ಎಷ್ಟೇ ಇರಲಿ, ಗೆಲ್ಲುವವರಿಗೆ ಟಿಕೆಟ್‌’ ಎಂಬ ತೀರ್ಮಾನಕ್ಕೆ ಬಿಜೆಪಿ ಬಂದಿದೆ ಎಂದು ತಿಳಿದುಬಂದಿದೆ.

ಇದಲ್ಲದೆ, ತಾವು ಸ್ಪರ್ಧೆ ಮಾಡಬೇಕೆ ಎಂಬುದರ ಬಗ್ಗೆ ಬಿಜೆಪಿಯ ಹಿರಿಯ ನಾಯಕರಾದ ಮುರಳಿ ಮನೋಹರ ಜೋಶಿ ಹಾಗೂ ಎಲ್‌. ಕೆ. ಅಡ್ವಾಣಿ ಅವರು ತಾವೇ ನಿರ್ಧಾರ ಕೈಗೊಳ್ಳಬೇಕು ಎಂಬ ನಿರ್ಣಯವನ್ನು ಶುಕ್ರವಾರ ನಡೆದ ಬಿಜೆಪಿಯ ಸಂಸದೀಯ ಮಂಡಳಿ ಕೈಗೊಂಡಿದೆ ಎಂದು ಗೊತ್ತಾಗಿದೆ.

ಅಡ್ವಾಣಿ (91), ಮುರಳಿ ಮನೋಹರ ಜೋಶಿ (85), ಭಗತ್‌ ಸಿಂಗ್‌ ಕೋಶಿಯಾರಿ (76), ಬಿ.ಸಿ. ಖಂಡೂರಿ (84), ಕಲ್‌ರಾಜ್‌ ಮಿಶ್ರಾ (77), ಶಾಂತಕುಮಾರ್‌ (84), ಸುಮಿತ್ರಾ ಮಹಾಜನ್‌ (76) ಅವರು 75 ವಯಸ್ಸು ಮೀರಿದ ಪ್ರಮುಖ ನಾಯಕರಾಗಿದ್ದಾರೆ.

ಈವರೆಗೆ ಪಕ್ಷದಲ್ಲಿ 75 ಮೀರಿದವರಿಗೆ ಸ್ಥಾನವಿಲ್ಲ ಎಂಬ ಅಘೋಷಿತ ನಿಯಮ ಜಾರಿಯಲ್ಲಿತ್ತು. ಅದನ್ನು ಈಗ ಬದಿಗೆ ಸರಿಸಲಾಗಿದೆ.

ಅಲ್ಲದೆ, ಹೊಸ ಅಭ್ಯರ್ಥಿಗಳಿಗೆ ಚುನಾವಣೆ ಸ್ಪರ್ಧೆಗೆ ಅವಕಾಶ ಮಾಡಿಕೊಡುವ ಜೊತೆಗೇ ಎಲ್ಲಾ ಹಂತದ ವೃತ್ತಿಪರರಿಗೂ ಟಿಕೆಟ್‌ ಕಲ್ಪಿಸಿಕೊಡಬೇಕು ಎಂಬ ನಿರ್ಣಯವನ್ನು ಚುನಾವಣಾ ರಣತಂತ್ರ ರೂಪಿಸಲು ಇತ್ತೀಚೆಗೆ ನಡೆದ ಬಿಜೆಪಿಯ ಸಂಸದೀಯ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.