ಮದುರೈ (ಡಿ. 27):  ಈವರೆಗೆ ‘ಮೋದಿ ಜಪ’ ಮಾಡುತ್ತಿದ್ದ ಯೋಗಗುರು ಬಾಬಾ ರಾಮದೇವ್‌ ಅವರು ಈಗ ರಾಗ ಬದಲಿಸಿದ್ದು, ‘2019ನೇ ಸಾಲಿನ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂದು ಹೇಳಲಾಗದು. ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎನ್ನುವುದರ ಬಗ್ಗೆ ಸದ್ಯ ಖಚಿತವಾಗಿ ನುಡಿಯಲು ಅಸಾಧ್ಯ’ ಎಂದು ಹೇಳಿದ್ದಾರೆ.

ತಮಿಳುನಾಡಿನ ಮದುರೈನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಬಾಬಾ, ‘2019ರ ಲೋಕಸಭೆ ಚುನಾವಣೆ ತುಂಬಾ ಕುತೂಹಲಕಾರಿಯಾಗಿದೆ. ಸುಲಭವಾಗಿ ಲೋಕಸಭಾ ಚುನಾವಣೆಯ ಗೆಲುವಿನ ಬಗ್ಗೆ ಹೇಳುವುದು ಕಷ್ಟ. ಸದ್ಯ ದೇಶದ ರಾಜಕೀಯ ಸ್ಥಿತಿಗತಿ ಅತ್ಯಂತ ಸ್ಪರ್ಧಾತ್ಮಕವಾಗಿದೆ. ಪರಿಸ್ಥಿತಿಯ ಸ್ಪಷ್ಟತೆ ಸಿಗುತ್ತಿಲ್ಲ’ ಎಂದರು.

ಅಲ್ಲದೆ, ‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾವು ಯಾರಿಗೂ ಕೂಡ ಬೆಂಬಲ ನೀಡುವುದಿಲ್ಲ. ವಿರೋಧವಾಗಿಯೂ ನಿಲ್ಲುವುದಿಲ್ಲ. ರಾಜಕೀಯದ ಬಗ್ಗೆ ತಮ್ಮ ಗಮನವನ್ನೂ ಹರಿಸುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು.

‘ನಮ್ಮ ಗುರಿ ಏನಿದ್ದರೂ ಹಿಂದೂ ರಾಷ್ಟ್ರ ನಿರ್ಮಾಣ ಹಾಗೂ ಯೋಗದ ಮೂಲಕ ಜಗತ್ತಿನಲ್ಲಿ ಆಧ್ಯಾತ್ಮಿಕತೆಯನ್ನು ಭಿತ್ತುವುದೇ ಆಗಿದೆ’ ಎಂದು ಬಾಬಾ ನುಡಿದರು.

2014ರ ಲೋಕಸಭೆ ಚುನಾವಣೆಯಲ್ಲಿ ಬಾಬಾ ರಾಮದೇವ್‌ ಅವರು ನರೇಂದ್ರ ಮೋದಿ ಅವರನ್ನು ಬಹಿರಂಗವಾಗಿ ಬೆಂಬಲಿಸಿದ್ದರು.