ಲೋಕಸಭಾ ಚುನಾವಣೆ : ಕಾಂಗ್ರೆಸ್‌ ಸೋಲಿಗೆ ಕಾರಣ ಬಹಿರಂಗ!

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನದಲ್ಲಿ ಗೆಲುವು ಪಡೆದಿದ್ದು, ಹೀನಾಯವಾಗಿ ಸೋಲಲು ಪಕ್ಷದ ಶಾಸಕರೇ ಕಾರಣ ಎನ್ನಲಾಗಿದೆ. 

Loksabha Election 2019 Karnataka Congress MLAs Behind Congress Defeat

ಬೆಂಗಳೂರು [ಸೆ.14]:  ‘ಕಾಂಗ್ರೆಸ್‌ ಶಾಸಕರ ಸ್ವ ಪ್ರತಿಷ್ಠೆ, ಕೆಲವರ ಪಕ್ಷ ವಿರೋಧಿ ಚಟುವಟಿಕೆ, ನಾಯಕರ ನಡುವಿನ ಆಂತರಿಕ ತಿಕ್ಕಾಟ ಹಾಗೂ ಷಡ್ಯಂತ್ರಗಳೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ಕಾರಣ. ಇದರಿಂದ ಪಕ್ಷದ ಗೆಲುವಿಗಾಗಿ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರ ಪ್ರಯತ್ನವೂ ವ್ಯರ್ಥಗೊಂಡಿತು.’

ಇವು, ಲೋಕಸಭಾ ಚುನಾವಣೆಯ ಸೋಲಿನ ಕಾರಣಗಳ ಸತ್ಯ ಶೋಧನೆಗೆ ಪಕ್ಷ ರಚಿಸಿದ್ದ ಮಾಜಿ ಸಚಿವ ಬಸವರಾಜ ರಾಯರಡ್ಡಿ ನೇತೃತ್ವದ ಸಮಿತಿಯ ಅಧ್ಯಯನದ ವೇಳೆ ಕಂಡುಬಂದಿರುವ ಅಂಶಗಳು. ಈ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಸಮಿತಿ ಪಕ್ಷಕ್ಕೆ ವರದಿ ನೀಡಲು ಕಾರಣಗಳ ಪಟ್ಟಿಸಿದ್ಧಪಡಿಸುತ್ತಿದೆ. ಅಕ್ಟೋಬರ್‌ 2ರಂದು ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದೆ.

ಹಲವು ಶಾಸಕರು ಸ್ವ ಪ್ರತಿಷ್ಠೆಯಿಂದ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಿಲ್ಲ. ಕೆಲವರು ಗೆಲುವಿಗೆ ಶ್ರಮಿಸದಿದ್ದರೂ ತಟಸ್ಥವಾಗಿ ಉಳಿದರೆ ಇನ್ನು ಕೆಲವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಕೆಲವೆಡೆ ಕಾಂಗ್ರೆಸ್‌ ಹಾಗೂ ಮೈತ್ರಿ ಅಭ್ಯರ್ಥಿಗಳನ್ನೇ ಸೋಲಿಸಲು ಷಡ್ಯಂತ್ರ ರೂಪಿಸಿದ್ದಾರೆ. ಇದರಿಂದ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಮತಗಳ ಕ್ರೋಢೀಕರಣಕ್ಕೆ ದೊಡ್ಡ ಪ್ರಮಾಣದ ಧಕ್ಕೆಯಾಗಿದೆ. ಇದೇ ಪಕ್ಷದ ಹೀನಾಯ ಸೋಲಿಗೆ ಕಾರಣ ಎಂಬುದು ಸಮಿತಿಯ ಅಧ್ಯಯನದ ವೇಳೆ ಬೆಳಕಿಗೆ ಬಂದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಮೇಶ್‌ ಕುಮಾರ್‌ ಕೈಕೊಟ್ಟರು:

ಕೋಲಾರದ ಸೋಲಿಗೆ ಸ್ಥಳೀಯ ಕಾಂಗ್ರೆಸ್‌ ಶಾಸಕರೇ ಕಾರಣ. ಕೆ.ಎಚ್‌. ಮುನಿಯಪ್ಪ ವಿರುದ್ಧದ ವೈಯಕ್ತಿಕ ಕಾರಣಗಳಿಂದ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಸೇರಿದಂತೆ ಜಿಲ್ಲೆಯ ಶಾಸಕರು ಪಕ್ಷದ ಪರ ಕೆಲಸ ಮಾಡಿಲ್ಲ ಎಂಬುದು ಸತ್ಯ ಶೋಧನೆಯಲ್ಲಿ ಕಂಡುಬಂದಿದೆ. ಅಲ್ಲದೆ, ಈ ಸಂಬಂಧ ಸ್ವತಃ ಕೆ.ಎಚ್‌. ಮುನಿಯಪ್ಪ ಅವರು ಕೂಡ ಸಮಿತಿ ಮುಂದೆ ರಮೇಶ್‌ ಕುಮಾರ್‌ ವಿರುದ್ಧ ದೂರು ನೀಡಿದ್ದಾರೆ. ಒಟ್ಟಿನಲ್ಲಿ ನಾಯಕರ ನಡುವಿನ ಸ್ವ ಪ್ರತಿಷ್ಠೆಯಿಂದಾಗಿ ಕೋಲಾರದಲ್ಲಿ ಪಕ್ಷ ಸೋತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

ಅದೇ ರೀತಿ, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಪ್ರಸ್ತುತ ಅನರ್ಹವಾಗಿರುವ ಶಾಸಕರು ಕಾಂಗ್ರೆಸ್‌ ಪರ ಕೆಲಸ ಮಾಡಲೇ ಇಲ್ಲ. 5 ಮಂದಿ ಕಾಂಗ್ರೆಸ್‌ ಶಾಸಕರಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮತಗಳನ್ನು ತಂದು ಕೊಟ್ಟಿಲ್ಲ. ಅನರ್ಹ ಶಾಸಕರಾದ ಬೈರತಿ ಬಸವರಾಜ್‌, ಎಸ್‌.ಟಿ. ಸೋಮಶೇಖರ್‌, ಮುನಿರತ್ನ ಅವರೇ ಪಕ್ಷದ ಸೋಲಿಗೆ ಕಾರಣರು ಎಂಬ ಅಂಶಗಳು ಅಧ್ಯಯನದ ವೇಳೆ ಸಮಿತಿ ಗಮನಕ್ಕೆ ಬಂದಿದ್ದು, ಇದೇ ಅಂಶಗಳನ್ನು ಕ್ಷೇತ್ರದ ಅಭ್ಯರ್ಥಿ, ಮಾಜಿ ಸಚಿವ ಕೃಷ್ಣ ಬೈರೇಗೌಡ ಕೂಡ ದೂರಿದ್ದಾರೆ. ಆದರೆ, ಜೆಡಿಎಸ್‌ ಶಾಸಕರಾಗಿದ್ದ ಕೆ.ಗೋಪಾಲಯ್ಯ ಅವರು ಮಾತ್ರ ತಮ್ಮ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲೂ ಸಂಚರಿಸಿ ಪ್ರಮುಖ ನಾಯಕರು, ಮುಖಂಡರು, ಮಾಜಿ ಸಚಿವರು, ಮಾಜಿ ಶಾಸಕರು, ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿರುವ ಬಸವರಾಜ ರಾಯರಡ್ಡಿ ನೇತೃತ್ವದ ಸತ್ಯಶೋಧನಾ ಸಮಿತಿ ವರದಿ ಅಂತಿಮಗೊಳಿಸುವ ಹಂತ ತಲುಪಿದೆ. ಕ್ಷೇತ್ರಗಳಲ್ಲಿನ ಪಕ್ಷದ ಪ್ರಮುಖ ನಾಯಕರು, ಕಾರ್ಯಕರ್ತರು, ಸಚಿವರು, ಮುಖಂಡರ ಅಭಿಪ್ರಾಯ ಸಂಗ್ರಹಿಸಿ ವರದಿ ತಯಾರಿಸುತ್ತಿದೆ. ಶೀಘ್ರ ವರದಿ ಅಂತಿಮಗೊಳಿಸಿ ಅ.2ರಂದು ಪಕ್ಷಕ್ಕೆ ವರದಿ ಸಲ್ಲಿಸಲಿದೆ.

Latest Videos
Follow Us:
Download App:
  • android
  • ios