ನವದೆಹಲಿ :  ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಇದೇ ವೇಳೆ 2019ನೇ ಸಾಲಿನ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂದು ಭವಿಷ್ಯ ಹೇಳಲು ಸಾಧ್ಯವಿಲ್ಲ ಎಂದು ಯೋಗಗುರು ಬಾಬಾ ರಾಮದೇವ್ ಹೇಳಿದ್ದಾರೆ. 

ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎನ್ನುವುದರ  ಬಗ್ಗೆ ಸದ್ಯ ಖಚಿತವಾಗಿ ನುಡಿಯಲು ಅಸಾಧ್ಯ ಎಂದು ಹೇಳಿದ್ದಾರೆ. 

2014ನೇ ಸಾಲಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಬೆಂಬಲ ನೀಡಿದ್ದ ರಾಮದೇವ್ ಇದೀಗ ಸದ್ಯದ ರಾಜಕೀಯ ಸ್ಥಿತಿಗತಿಗಳನ್ನು ಗಮನಿಸಿ ಉಲ್ಟಾ ಹೊಡೆದಿದ್ದಾರೆ. ಸುಲಭವಾಗಿ ಲೋಕಸಭಾ ಚುನಾವಣೆಯ ಗೆಲುವಿನ ಬಗ್ಗೆ ಹೇಳುವುದು ಕಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  

ಇತ್ತೀಚೆಗಷ್ಟೇ ದೇಶದ ಪಮಚರಾಜ್ಯಗಳಲ್ಲಿ ಚುನಾವಣೆ ನಡೆದಿದ್ದು, ಇದರಲ್ಲಿ ಮೂರು ರಾಜ್ಯಗಳನ್ನು ‘ಕೆ’  ವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಬಿಜೆಪಿ ಐದೂ ರಾಜ್ಯಗಳನ್ನು ಕಳೆದುಕೊಂಡಿತ್ತು. ಈ ನಿಟ್ಟಿನಲ್ಲಿ  ಸದ್ಯ ದೇಶದ ರಾಜಕೀಯ ಸ್ಥಿತಿಗತಿ ಅತ್ಯಂತ ಸ್ಪರ್ಧಾತ್ಮಕವಾಗಿದೆ. ಪರಿಸ್ಥಿತಿ ಸ್ಪಷ್ಟತೆ ಸಿಗುತ್ತಿಲ್ಲ ಎಂದಿರುವ ರಾಮ ದೇವ್  ಭಯಂಕರವಾದ ರಾಜಕೀಯ ಬೆಳವಣಿಗೆಗಳ ನಡುವೆ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎನ್ನುವುದರ ಬಗ್ಗೆ  ತಿಳಿಸಲಾಗದು ಎಂದರು. 

ರಾಮೇಶ್ವರಂ ನಲ್ಲಿ ನಡೆದ ಭಾರತ ಸ್ವಾಭಿಮಾನಿ ಬಳಗದ ಸಭೆಯಲ್ಲಿ  ಈ ವಿಚಾರ ಮಾತನಾಡಿದ ಅವರು ಮುಂದಿನ 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ತಾವು ಯಾರಿಗೂ ಕೂಡ ಬೆಂಬಲ ನೀಡುವುದಿಲ್ಲ. ವಿರೋಧವಾಗಿಯೂ ನಿಲ್ಲುವುದಿಲ್ಲ.  ರಾಜಕೀಯದ ಬಗ್ಗೆ ತಮ್ಮ ಗಮನವನ್ನೂ ಹರಿಸುವುದಿಲ್ಲ ಎಂದು  ಸ್ಪಷ್ಟವಾಗಿ ಹೇಳಿದರು.  

ನಮ್ಮ ಗುರಿ ಏನಿದ್ದರೂ ಹಿಂದೂ ರಾಷ್ಟ್ರ ನಿರ್ಮಾಣ ಹಾಗೂ ಯೋಗದ ಮೂಲಕ ಜಗತ್ತಿನಲ್ಲಿ ಆಧ್ಯಾತ್ಮಿಕತೆಯನ್ನು ಭಿತ್ತುವುದೇ ಆಗಿದೆ ಎಂದು ರಾಮದೇವ್  ಹೇಳಿದ್ದಾರೆ.