ನವದೆಹಲಿ(ಜು.20): ಲೋಕಸಭೆಯಲ್ಲಿ ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೋರಿದ ವರ್ತನೆಗೆ ಎಲ್ಲೆಡೆ ಟೀಕೆ ಕೇಳಿ ಬಂದಿದೆ. ರಾಹುಲ್ ನಡೆಯನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಮತ್ತು ಸದನದ ಕೆಲ ಸದಸ್ಯರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡ ರಾಹುಲ್ ಗಾಂಧಿ ನಡೆಯನ್ನು ಕೇಂದ್ರ ಸಚಿವೆ ಹರ್‌ಸಿಮ್ರತ್‌ ಕೌರ್‌ ಬಾದಲ್ ಖಂಡಿಸಿದ್ದು, ಇದು ಸಂಸತ್ತೇ ಹೊರತು ಮುನ್ನಾಭಾಯೀ ಚಿತ್ರದ ಸೆಟ್ ಅಲ್ಲ ಎಂದು ಹರಿಹಾಯ್ದಿದ್ದಾರೆ.

ಅಲ್ಲದೇ ತಮ್ಮ ಭಾಷಣದಲ್ಲಿ ರಾಹುಲ್ ಪಂಜಾಬ್ ರಾಜ್ಯದವರು ಯಾವಾಗಕಲೂ ಮಾದಕ ದ್ರವ್ಯದ ನಶೆಯಲ್ಲಿರುತ್ತಾರೆ ಎಂದು ಹೇಳಿದ್ದೂ ಹರ್‌ಸಿಮ್ರತ್‌ ಕೌರ್‌ ಬಾದಲ್ ಅವರನ್ನು ಕೆರಳಿಸಿತು. ಇಂದು ಸದನಕ್ಕೆ ಏನು ತಿಂದು ಬಂದಿದ್ದೀರಿ ರಾಹುಲ್ ಎಂದು ಹರ್‌ಸಿಮ್ರತ್‌ ಕೌರ್ ಆಕ್ರೋಶ ವ್ಯಕ್ತಪಡಿಸಿದರು.

 ಇನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಲಿಂಗಿಸಿದ ಬಳಿಕ ರಾಹುಲ್ ಕಣ್ಣು ಹೊಡೆದ ವರ್ತನೆಗೆ ಸ್ಪೀಕರ್ ಸುಮಿತ್ರಾ ಮಹಾಜನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರಿಗೆ ಒಂದು ಗೌರವ ಇರುತ್ತದೆ. ಹೀಗಾಗಿ ಎಲ್ಲಾ ಸಂಸದರು ಸದನದ ನಿಯಗಳನ್ನು ಪಾಲಿಸಬೇಕು ರಾಹುಲ್ ಗಾಂಧಿಯ ವರ್ತನೆ ಸದನಕ್ಕೆ ತಕ್ಕುದಲ್ಲ ಎಂದು ಸ್ಪೀಕರ್ ಹೇಳಿದ್ದಾರೆ.