ಕಂದಾಯ ಜಮೀನು, ಹಸಿರು ವಲಯಗಳಲ್ಲಿ ಬಡಾವಣೆ ನಿರ್ಮಾಣ, ಬಸವ ವಸತಿ, ಇಂದಿರಾ ಆವಾಜ್‌, ನರೇಗಾದಲ್ಲಿ ಅಕ್ರಮ, ಬಿಲ್‌ ಇಲ್ಲದೆ ಗುತ್ತಿಗೆದಾರನಿಗೆ ಲಕ್ಷಾಂತರ ರು. ಬಿಡುಗಡೆ ಸೇರಿ ಇತರೆ ಆರೋಪ

ಬೆಂಗಳೂರು (ನ.02): ಸ್ಥಳೀಯ ಸಂಸ್ಥೆಗಳಲ್ಲಿ 2016ರ ಏಪ್ರಿಲ್‌ನಿಂದ ಅಕ್ಟೋಬರ್‌ ನಡುವಿನ ಅವಧಿಯಲ್ಲಿ ನಡೆದ ಒಂದಷ್ಟುಅವ್ಯವಹಾರಗಳಿಗೆ ಸಂಬಂಧಿಸಿ ರಾಜ್ಯದ ಹಲವು ಗ್ರಾಪಂಗಳ ಪಿಡಿಒಗಳು ಮತ್ತು ಕಾರ್ಯ​ದರ್ಶಿ​ಗಳು ಸೇರಿ 76 ಮಂದಿ ಹಾಗೂ ಜಿಪಂ ಸಿಇಒ, ತಾಪಂ ಇಒ, ಮುಖ್ಯ ಯೋಜನಾ​ಧಿಕಾರಿ, ಯೋಜ​ನಾ​​ಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ ನಡೆಸು​​ವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ​ಯತ್‌ ರಾಜ್‌ ಇಲಾಖೆ ಲೋಕಾಯುಕ್ತಕ್ಕೆ ಸೂಚಿಸಿದೆ.

ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಗಾಪಂ ಕಾರ್ಯದರ್ಶಿಗಳು ಸರ್ಕಾರದ ಹಣ ದುರು​ಪಯೋಗ​ಪಡಿಸಿ ಕೊಂಡಿರುವ ಮೊತ್ತ ರೂ.1.56 ಕೋಟಿ ಎಂದು ತಿಳಿದು ಬಂದಿದೆ. ಕೆಲ ಗ್ರಾಪಂ​​ಗಳಲ್ಲಿ ರೂ.15 ಲಕ್ಷಗಳಿಂದ ರೂ.25 ಲಕ್ಷಗಳವರೆಗೆ ಸರ್ಕಾರದ ಹಣ ದುರುಪಯೋಗ ಆಗಿದೆ. ಆರೋಪಕ್ಕೆ ಗುರಿ​ಯಾದ ಪಿಡಿಒ, ಕಾರ್ಯದರ್ಶಿ​ಗಳಲ್ಲಿ ಉತ್ತರ ಕರ್ನಾಟಕದ ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಆರೋಪಗಳೇನು?: ಕಂದಾಯ ಜಮೀನು ಮತ್ತು ಹಸಿರು ವಲಯಗಳಲ್ಲಿ ಬಡಾವಣೆ ನಿರ್ಮಾಣ, ಬಸವ ವಸತಿ, ಇಂದಿರಾ ಆವಾಜ್‌ ಯೋಜನೆ, ನರೇಗಾದಲ್ಲಿ ಅಕ್ರಮ, ಬಿಲ್‌ ಇಲ್ಲದೆ ಗುತ್ತಿಗೆದಾರನಿಗೆ ಲಕ್ಷಾಂತರ ರು. ಬಿಡುಗಡೆ, ಶಾಲೆಗಳ ಅಡುಗೆ ಕೋಣೆ, ಶೌಚಾಲಯಗಳ ಕಳಪೆ ಕಾಮಗಾರಿ, ಚೆಕ್‌ ಪೋಸ್ಟ್‌ಗಳಲ್ಲಿ ಲಾರಿ, ವಾಹನ ಚಾಲಕರಿಂದ ಲಂಚಕ್ಕಾಗಿ ಬೇಡಿಕೆ, ಗ್ರಾಮ ನೈರ್ಮಲ್ಯ ಯೋಜನೆಯಲ್ಲಿ ಹಣ ದುರ್ಬಳಕೆ, ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಕಾರ್ಮಿಕರಿಗೆ ಕೂಲಿ ಪಾವತಿಸದಿರುವುದು, ಫಲಾನುಭವಿಗಳ ಆಯ್ಕೆಯಲ್ಲಿ ನಿಯಮಗಳ ಉಲ್ಲಂಘನೆ, ತೆರಿಗೆ ಪಾವತಿಸ​ದಿರುವುದು, ರಸ್ತೆ ನಿರ್ಮಾಣ ಕಾಮ​ಗಾರಿಯಲ್ಲಿ ಅವ್ಯವಹಾರ, ಸರ್ಕಾರಿ ನೌಕರರಿಗೆ ಜಾಬ್‌ ಕಾರ್ಡ್‌ ನೀಡಿಕೆ, ತೆರಿಗೆ ಹಣ, ಶುಲ್ಕ ವಸೂಲಿ ಮೊತ್ತವನ್ನು ಉದ್ದೇಶಪೂರ್ವಕವಾಗಿ ಹೆಚ್ಚಿಸಿ ಆ ಹಣವನ್ನು ಬ್ಯಾಂಕ್‌ ಖಾತೆಗೆ ಜಮಾ ಮಾಡದಿರುವುದು, ಮನೆ, ಶೌಚಾಲಯ ನಿರ್ಮಿಸದೆ ಹಣ ದುರ್ಬಳಕೆ ಮಾಡಿರುವುದು, ಒಂದೇ ನಿವೇಶನವನ್ನು ಹಲವು ವ್ಯಕ್ತಿಗಳಿಗೆ ಮಂಜೂರು ಮಾಡಿರುವುದು, ಆಶ್ರಯ, ಕುಡಿ​ಯುವ ನೀರಿನ ಯೋಜನೆಯಲ್ಲಿ ಅವ್ಯವಹಾರ, ನಕಲಿ ಸಹಿ ಹಾಕಿ ಹಣ ದುರುಪಯೋಗ, ಹಣ ಮಂಜೂರು ಮಾಡಿ ಕಾಮಗಾರಿ ನಿರ್ವ​ಹಿಸದಿರುವುದು, ವಿದ್ಯುತ್‌ ಬಲ್ಬ್, ವಿದ್ಯುತ್‌ ಸಾಮಗ್ರಿ, ವೈರ್‌ ಖರೀದಿಯಲ್ಲಿ ಅಕ್ರಮ, ಪೈಪ್‌ಲೈನ್‌ ದುರಸ್ತಿಯಲ್ಲಿ ಅನುದಾನ ದುರ್ಬಳಕೆ, ಸಾರ್ವ​ಜನಿಕ ಆಸ್ತಿ ಮಾರಾಟ ಮಾಡಿರುವ ಅಕ್ರಮ​ಗಳಲ್ಲಿ ಪಿಡಿಒ, ಗ್ರಾಪಂ ಕಾರ್ಯದರ್ಶಿಗಳು ಭಾಗಿ ಆಗಿರುವುದು ದಾಖಲೆಗಳಿಂದ ತಿಳಿದು ಬಂದಿದೆ.

ಬಾಗಲಕೋಟೆ ಜಿಲ್ಲೆಯ ಹಿರೇಬಾದವಾಡಗಿ, ಬೆಳಗಲ್‌ ಗ್ರಾಪಂಗೆ 2013-14 ಮತ್ತು 2014-15ನೇ ಸಾಲಿಗೆ ಬಿಡುಗಡೆಯಾಗಿದ್ದ ಒಟ್ಟು ಅನುದಾನದಲ್ಲಿ ರೂ.27.92 ಲಕ್ಷವನ್ನು ಪಿಡಿಒಗಳು ದುರುಪಯೋಗಪಡಿಸಿಕೊಂಡಿರುವುದು ದಾಖಲೆ​ಗಳಿಂದ ತಿಳಿದುಬಂದಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಚಂದಾಪುರ ಗ್ರಾಪಂಗೆ 2010-11​ರಿಂದ 2012-13ನೇ ಸಾಲಿಗೆ ಬಿಡುಗಡೆ​ಯಾಗಿದ್ದ ಅನುದಾನದಲ್ಲಿ ಒಟ್ಟು ರೂ.23.36 ಲಕ್ಷವನ್ನು ಹಣವನ್ನು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ.

ಅದೇ ರೀತಿ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸುತ್ತುಕೋಟೆ ಗ್ರಾಪಂ ನರೇಗಾದಡಿ ಭಾರ​ತ ನಿರ್ಮಾಣ ರಾಜೀವ್‌ ಗಾಂಧಿ ಸೇವಾ ಕೇಂದ್ರ ಕಟ್ಟಡ ಕಾಮಗಾರಿಯಲ್ಲಿ ರೂ.15 ಲಕ್ಷ ದುರು​ಪ​ಯೋಗವಾಗಿದ್ದರೆ, ಧಾರವಾಡ ತಾಲೂಕಿನ ಕೋಟೂರು, ಸಿಂಗನಹಳ್ಳಿಯಲ್ಲಿ 2012​ರಿಂದ 2014ರವರೆಗೆ ನಡೆದ ಕಾಮಗಾರಿ​ಗಳಲ್ಲಿ .18.05 ಲಕ್ಷ ದುರ್ಬಳಕೆಯಾಗಿರುವುದು ಗೊತ್ತಾಗಿದೆ.

ತಾಪಂ ಇಒಗಳ ವಿರುದ್ಧವೂ ವಿಚಾರಣೆ: ಕಲಘಟಗಿ ತಾಪಂಗೆ ಬಿಡುಗಡೆಯಾಗಿದ್ದ ರೂ.2 ಕೋಟಿಯಲ್ಲಿ ಬೋಗಸ್‌ ಬಿಲ್‌ ಸೃಷ್ಟಿಸಿ ರೂ.50 ಲಕ್ಷ ಅಕ್ರಮವಾಗಿ ಪಡೆದಿರುವುದು, ರಾಣೆಬೆನ್ನೂರು ತಾಪಂನಲ್ಲಿ ರೂ.3.70 ಲಕ್ಷವನ್ನು ಅನಧಿಕೃತವಾಗಿ ಡ್ರಾ ಮಾಡಿಕೊಂಡಿರುವ ಪ್ರಕರಣದಲ್ಲಿ ಕಾರ್ಯ​ನಿರ್ವಾಹಣಾ​ಧಿಕಾರಿ ಎಂ.ಎಸ್‌.ಮೇಟಿ ಮತ್ತು ಕೃಷ್ಣ​ಮೂರ್ತಿ ವಿರುದ್ಧದ ವಿಚಾರಣೆಯನ್ನು ಉಪ-ಲೋಕಾ​ಯುಕ್ತರಿಗೆ ವಹಿಸಲಾಗಿದೆ. ಹಾಗೆಯೇ, ನರೇಗಾದಡಿ ಕಳಪೆ ಕಾಮಗಾರಿ ನಡೆಸಿದ ಆರೋಪಕ್ಕೆ ಸಂಬಂಧಿಸಿ ಹಿರೇಕೆರೂರು ತಾಪಂನ ಇಒ ಎಂ.ಎನ್‌.ಮಾಳಿಗೇರ, ಮುಧೋಳ ತಾಪಂನ ಇಒ ಜಿ.ವೆಂಕಟೇಶ, ಅನುದಾನ ದುರ್ಬಳಕೆ ಆರೋಪದಡಿ ಚಾಮರಾಜನಗರ ತಾಪಂನ ಇಒ ಮಲ್ಲಿಕಾರ್ಜುನಸ್ವಾಮಿ, ಗೋಮಾಳ​ವನ್ನು ಅತಿಕ್ರಮಿಸಿ ನಿವೇಶನ ರಚನೆ ಆರೋಪ ಸಂಬಂಧ ಹರಿಹರ ತಾಪಂನ ಇಒ ಡಾ.ಎಸ್‌.ರಂಗಸ್ವಾಮಿ, ರೂ.39,418 ದುರುಪಯೋಗ ಪ್ರಕರಣದಲ್ಲಿ ಉತ್ತರ ಕನ್ನಡ ಜಿಪಂನ ಉಪಯೋಜನಾ ವ್ಯವಸ್ಥಾಪಕ ಮುಕ್ಕಣ್ಣ ಕರಿಗಾರ, ಸರ್ಕಾರಿ ಜಾಗ ಒತ್ತುವರಿ ಮಾಡಲು ಸಹಾಯ ಮಾಡಿರುವ ಆರೋಪದಡಿ ಅಂಕೋಲ ತಾಪಂನ ಇಒ ಎಸ್‌.ಬಾಲಕೃಷ್ಣ ವಿರುದ್ಧ ವಿಚಾರಣೆ ನಡೆಸಲು ಆದೇಶಿಸಲಾಗಿದೆ.

ಇನ್ನು, ಚಿತ್ರದುರ್ಗ ಜಿಪಂನಲ್ಲಿ ಯೋಜನಾ ನಿರ್ದೇಶಕ ಬಸವರಾಜ್‌, ವಿಠಲ್‌, ಲಕ್ಷ್ಮಿನಾರಾಯಣ ಅವರ ವಿರುದ್ಧ ವಿವಿಧ ಪ್ರಕರಣಗಳಲ್ಲಿ ವಿಚಾರಣೆ ನಡೆಸಲು ಉಪ ಲೋಕಾಯುಕ್ತರಿಗೆ ವಹಿಸಲಾಗಿದೆ. ಸಿಇಒ ಆಗಿದ್ದ ಐಎಎಸ್‌ ಅಧಿಕಾರಿ ಎಸ್‌.ಎನ್‌.ಜಯರಾಂ, ಐಎಫ್‌ಎಸ್‌ ಅಧಿಕಾರಿ ರಂಗೇಗೌಡ, ಎಚ್‌.ಪಿ.ಪ್ರಕಾಶ್‌ ವಿರುದ್ಧ ವಿಚಾರಣೆಗೆ ಅನುಮತಿ ನೀಡಲು ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ್‌ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪತ್ರ ಬರೆದಿರುವುದು ತಿಳಿದು ಬಂದಿದೆ.