ಬಾಲಕೃಷ್ಣೇಗೌಡ ಅವರು 5.24 ಕೋಟಿ ರು. ವೌಲ್ಯದ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿ ಅವರನ್ನು ಆರೋಪದಿಂದ ಮುಕ್ತಗೊಳಿಸಿದ್ದ ಆದೇಶ ರದ್ದು ಕೋರಿ ಲೋಕಾಯುಕ್ತ ಪೊಲೀಸರು ಹೈಕೋರ್ಟ್ ಮೇಲ್ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು(ಮಾ.03): ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪುತ್ರ, ನಿವೃತ್ತ ಕೆಎಎಸ್ ಅಕಾರಿ ಬಾಲಕೃಷ್ಣೇಗೌಡ ಅವರನ್ನು ಅಕ್ರಮ ಆಸ್ತಿ ಗಳಿಕೆ ಆರೋಪದಿಂದ ಮುಕ್ತಗೊಳಿಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶ ಪ್ರಶ್ನಿಸಿ ಲೋಕಾಯುಕ್ತ ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಬಾಲಕೃಷ್ಣೇಗೌಡ ಅವರು 5.24 ಕೋಟಿ ರು. ವೌಲ್ಯದ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿ ಅವರನ್ನು ಆರೋಪದಿಂದ ಮುಕ್ತಗೊಳಿಸಿದ್ದ ಆದೇಶ ರದ್ದು ಕೋರಿ ಲೋಕಾಯುಕ್ತ ಪೊಲೀಸರು ಹೈಕೋರ್ಟ್ ಮೇಲ್ಮನವಿ ಸಲ್ಲಿಸಿದ್ದಾರೆ. ಶುಕ್ರವಾರ ಲೋಕಾಯುಕ್ತ ಪೊಲೀಸರು ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಬಾಲಕೃಷ್ಣೇಗೌಡ ಅವರಿಗೆ ನೋಟಿಸ್ ಜಾರಿ ಮಾಡಿತು. ಅಲ್ಲದೆ, ಅವರ ಮನೆ ಮೇಲೆ ದಾಳಿ ನಡೆಸಿದ ವೇಳೆ ವಶಕ್ಕೆ ಪಡೆದುಕೊಂಡಿದ್ದ ಆಸ್ತಿಗೆ ಸಂಬಂಧಿಸಿದ ಕೆಲವೊಂದು ದಾಖಲೆ ಹಾಗೂ ವಸ್ತುಗಳನ್ನು ಹಿಂದಿರುಗಿಸುವಂತೆ ಲೋಕಾಯುಕ್ತ ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ನೀಡಿದ್ದ ನಿರ್ದೇಶನಕ್ಕೆ ಹೈಕೋರ್ಟ್ ಇದೇ ವೇಳೆ ತಡೆಯಾಜ್ಞೆ ನೀಡಿತು.
ಪ್ರಕರಣವೇನು?
ಭದ್ರಾವತಿ ಮೂಲದ ಎಸ್.ಎನ್. ಬಾಲಕೃಷ್ಣ ಎಂಬುವರು 2011ರ ಅಕ್ಟೋಬರ್‌ನಲ್ಲಿ ಲೋಕಾಯುಕ್ತದಲ್ಲಿ ಬಾಲಕೃಷ್ಣೇಗೌಡ ವಿರುದ್ಧ ದೂರು ದಾಖಲಿಸಿದ್ದರು. ತನಿಖೆ ವೇಳೆ ಲೋಕಾಯುಕ್ತ ಪೊಲೀಸರು ಬಾಲಕೃಷ್ಣೇಗೌಡ ಅವರ ಮನೆ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ತನಿಖೆ ನಡೆಸಿ 2012ರ ಆಗಸ್ಟ್‌ನಲ್ಲಿ ಲೋಕಾಯುಕ್ತ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಬಾಲಕೃಷ್ಣೇಗೌಡ ಅವರು 5.24 ಕೋಟಿ ರು. ವೌಲ್ಯದ ಅಕ್ರಮ ಆಸ್ತಿ ಗಳಿಸಿದ್ದಾರೆ ಹಾಗೂ ಆಸ್ತಿ ಮತ್ತು ಖರ್ಚಿಗಿಂತ 28 ಲಕ್ಷ ರು. ಹೆಚ್ಚಿನ ಆದಾಯ ಹೊಂದಿದ್ದಾರೆ ಎಂದು ತನಿಖಾಕಾಧಿರಿಗಳು ಆರೋಪ ಪಟ್ಟಿಯಲ್ಲಿ ದಾಖಲಿಸಿದ್ದರು. ಆದರೆ, ಪ್ರಕರಣದ ವಿಚಾರಣೆ ನಡೆಸಿದ್ದ ಲೋಕಾಯುಕ್ತ ನ್ಯಾಯಾಲಯವು ಬಾಲಕೃಷ್ಣೇ ಗೌಡ ಅವರು ಅಕ್ರಮ ಆಸ್ತಿ ಗಳಿಸಿದ್ದಾರೆ ಮತ್ತು ಆದಾಯ ಮೀರಿ ಆಸ್ತಿ ಹೊಂದಿರುವ ಆರೋಪದಲ್ಲಿ ಯಾವುದೇ ಹುರಳಿಲ್ಲ. ಹೀಗಾಗಿ, ಆವರನ್ನು ಆರೋಪದಿಂದ ಮುಕ್ತಗೊಳಿಸಲಾಗಿದೆ ಎಂದು 2016ರ ನೆ.4ರಂದು ಆದೇಶ ನೀಡಿತ್ತು. ಈ ಆದೇಶ ರದ್ದು ಕೋರಿ ಲೋಕಾಯುಕ್ತ ಪೊಲೀಸರು ಇದೀಗ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
(ಕನ್ನಡಪ್ರಭ ವಾರ್ತೆ)
