ಬೆಂಗಳೂರು :  ಲೋಕಸಭಾ ಚುನಾವಣೆಯಲ್ಲಿ ಹೀನಾಯ ಪ್ರದರ್ಶನದ ನಂತರ ಮೈತ್ರಿಕೂಟಕ್ಕೆ ಇದೀಗ ರಾಜ್ಯದ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ಅತಿ ದೊಡ್ಡ ಸವಾಲು ಎದುರಾಗಿದೆ.

ತಲಾ ಒಂದು ಸ್ಥಾನ ಗಳಿಕೆ ಮೂಲಕ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಹೀನಾಯ ಸ್ಥಿತಿಗೆ ತಲುಪಿದ್ದು, ಸಮಾನ ದುಃಖಿಗಳಾಗಿದ್ದಾರೆ. ಹೀಗಾಗಿ, ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಬದಿಗಿಟ್ಟು ಏಕೈಕ ಆಸರೆಯಾಗಿರುವ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುವುದು ಉಭಯ ಪಕ್ಷಗಳ ನಾಯಕರಿಗೆ ಇದೀಗ ಅನಿವಾರ್ಯವಾಗಿದೆ. ಏಕೆಂದರೆ...

1- ಈ ಚುನಾವಣೆಯಲ್ಲಿ ಜೆಡಿಎಸ್‌ ಉತ್ತಮ ಸಾಧನೆ ತೋರದಿದ್ದರೆ ಆಗ ಮುಖ್ಯಮಂತ್ರಿ ಸ್ಥಾನ ಬದಲಾವಣೆಗೆ ಕೋರುವ ಮನಸ್ಥಿತಿ ರಾಜ್ಯ ಕಾಂಗ್ರೆಸ್‌ ನಾಯಕರು ಹಾಗೂ ಶಾಸಕರಿಗೆ ಇತ್ತು. ಆದರೆ, ಕಾಂಗ್ರೆಸ್‌ ಕೂಡ ಕಳಪೆ ಸಾಧನೆ ಮಾಡಿರುವುದರಿಂದ ಇಂತಹ ದುಸ್ಸಾಹಸ ತೋರುವ ಸಾಧ್ಯತೆಗಳಿಲ್ಲ. ಹೈಕಮಾಂಡ್‌ ಬೆಂಬಲ ಕೂಡ ಇಲ್ಲವಾಗುವ ಕಾರಣ ಹಾಲಿ ಸ್ಥಿತಿಯಲ್ಲೇ ಮುಂದುವರೆಯಲಿ ಎಂದು ಬಯಸಬಹುದು.

2- ನಿರೀಕ್ಷೆ ಮೀರಿದ ಸಾಧನೆ ತೋರಿರುವ ಬಿಜೆಪಿಯತ್ತ ಕಾಂಗ್ರೆಸ್‌ ಶಾಸಕರು ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಬಹುದು. ಆದರೆ, ದೇಶದಲ್ಲಿ ಕೆಲವೇ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಪಕ್ಷವು ರಾಜ್ಯದಲ್ಲೂ ಅಧಿಕಾರವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ.ಹೀಗಾಗಿ ಕಾಂಗ್ರೆಸ್‌ ಹೈಕಮಾಂಡ್‌ ಹಾಲಿ ಸ್ವರೂಪದಲ್ಲೇ ಸರ್ಕಾರ ಮುಂದುವರೆಯುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ನಾಯಕತ್ವದ ಮೇಲೆ ಒತ್ತಡ ನಿರ್ಮಾಣ ಮಾಡಬಹುದು.

3- ಕಾಂಗ್ರೆಸ್‌ನ ಅತೃಪ್ತ ಶಾಸಕರು ದೊಡ್ಡ ಮಟ್ಟದಲ್ಲಿ ಬಿಜೆಪಿಯತ್ತ ವಲಸೆ ಹೊರಟರೆ, ಅಂತಹ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನವೇ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಕೂಟಕ್ಕೆ ಕಬ್ಬಿಣದ ಕಡಲೆಯಾಗಬಹುದು.

4-ಮಂಡ್ಯದಲ್ಲಿ ನಿಖಿಲ್‌ ಹಾಗೂ ತುಮಕೂರಿನಲ್ಲಿ ದೇವೇಗೌಡರ ಸೋಲಿನ ಪರಿಣಾಮ ಜೆಡಿಎಸ್‌ ಸರ್ಕಾರದ ಚುಕ್ಕಾಣಿಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಮುಂದಾಗಬಹುದು. ಬದಲಾಗಿ, ಹೆಚ್ಚಿನ ಸಚಿವ ಸ್ಥಾನಗಳನ್ನು ತನಗೆ ಕೋರಬಹುದು. ಇದನ್ನು ಒಪ್ಪಿದ್ದರೆ ಸಚಿವ ಸ್ಥಾನಗಳು ಕಡಿಮೆಯಾಗಿ ಕಾಂಗ್ರೆಸ್‌ನ ಅತೃಪ್ತ ಶಾಸಕರಿಗೆ ನೀಡಲು ಅಧಿಕಾರದ ಸ್ಥಾನಗಳು ಕಡಿಮೆಯಾಗುವುದರಿಂದ ಕಾಂಗ್ರೆಸ್‌ ಸಂಕಷ್ಟಕ್ಕೆ ಸಿಲುಕಬಹುದು.

5- ಕಾಂಗ್ರೆಸ್‌ ಜತೆ ಮೈತ್ರಿ ಮುಂದುವರಿಕೆಯಿಂದ ಹೆಚ್ಚು ಲಾಭವಿಲ್ಲ ಎಂದೇನಾದರೂ ಜೆಡಿಎಸ್‌ ನಿರ್ಧರಿಸಿದರೆ ಆಗ ಆ ಪಕ್ಷ ತಾನಾಗೇ ಬಿಜೆಪಿಗೆ ಬೆಂಬಲ ನೀಡಲು ಮುಂದಾಗಬಹುದು. ಈ ಹಂತದಲ್ಲಿ ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಬೇರೆ ಯಾರಿಗಾದರೂ ಮುಖ್ಯಮಂತ್ರಿ ಸ್ಥಾನ ನೀಡಿದರೆ ಮೈತ್ರಿಗೆ ರೆಡಿ ಎನ್ನಬಹುದು.

6- ಈ ಷರತ್ತಿಗೆ ಬಿಜೆಪಿ ಒಪ್ಪದಿದ್ದದರೆ, ಮುಖ್ಯಮಂತ್ರಿ ಹುದ್ದೆಯನ್ನು ಬಿಜೆಪಿಗೆ ಬಿಟ್ಟುಕೊಟ್ಟು, ಉಪ ಮುಖ್ಯಮಂತ್ರಿ ಹಾಗೂ ಹೆಚ್ಚಿನ ಸಚಿವ ಸ್ಥಾನಗಳಿಗೆ ಜೆಡಿಎಸ್‌ ಬೇಡಿಕೆಯಿಡಬಹುದು. ಅಕಸ್ಮಾತ್‌ ಈ ಬೇಡಿಕೆಗೆ ಬಿಜೆಪಿ ಒಪ್ಪಿಬಿಟ್ಟರೆ ಆಗ ಕುಮಾರಸ್ವಾಮಿ ಸಿಎಂ ಹುದ್ದೆ ತ್ಯಜಿಸಿ ಪಕ್ಷದ ಉನ್ನತ ಸ್ಥಾನಕ್ಕೆ ತೃಪ್ತರಾಗಬಹುದು ಹಾಗೂ ಎಚ್‌.ಡಿ. ರೇವಣ್ಣ ಉಪ ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಬಹುದು.

7- ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಅನಿವಾರ್ಯವಾಗಿ ಪ್ರತಿಪಕ್ಷದಲ್ಲಿ ಕೂರಬೇಕಾಗುತ್ತದೆ. ಇದು ಕಾಂಗ್ರೆಸ್‌ ಪಾಲಿಗೆ ದೊಡ್ಡ ನಷ್ಟದ ಬಾಬ್ತು ಆಗುವುದರಿಂದ ಜೆಡಿಎಸ್‌ನ ಷರತ್ತುಗಳಿಗೆ ಅನುಗುಣವಾಗಿ ಮೈತ್ರಿ ಸರ್ಕಾರವನ್ನ ಉಳಿಸಿಕೊಳ್ಳಲು ಶತ ಪ್ರಯತ್ನ ನಡೆಸಬಹುದು.