ಬೆಂಗಳೂರು :  ತೆಲಂಗಾಣದ ರಾಜ್ಯದ ಟಿಆರ್‌ಎಸ್‌ ಪಕ್ಷದ ಅಭೇದ್ಯವಾದ ಭದ್ರಕೋಟೆ ಭೇದಿಸಿ ಕಮಲ ಅರಳಿಸುವಲ್ಲಿ ಆ ರಾಜ್ಯದ ಬಿಜೆಪಿ ಉಸ್ತುವಾರಿ ಹೊತ್ತಿದ್ದ ಕರ್ನಾಟಕದ ಹಿರಿಯ ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕೇವಲ ಆರು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಬಿಜೆಪಿ ಈ ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದೆ. ವಿಧಾನಸಭಾ ಚುನಾವಣೆಯಲ್ಲಿನ ಪಕ್ಷದ ಕಳಪೆ ಸಾಧನೆ ಹಿನ್ನೆಲೆ ಅಲ್ಲಿನ ಉಸ್ತುವಾರಿಯನ್ನು ಬದಲಿಸಿ, ಲೋಕಸಭಾ ಚುನಾವಣೆ ಗುರಿಯಾಗಿಸಿಕೊಂಡು ಅರವಿಂದ್‌ ಲಿಂಬಾವಳಿ ಅವರಿಗೆ ಜವಾಬ್ದಾರಿ ವಹಿಸಲಾಗಿತ್ತು.

ಕೇಂದ್ರ ಸಚಿವ ದಿ.ಅನಂತ್‌ ಕುಮಾರ್‌ ನಿಧನದ ಬಳಿಕ ರಾಜ್ಯವೊಂದರ ಉಸ್ತುವಾರಿಯಾಗಿ ನೇಮಕಗೊಂಡ ಮೊದಲ ನಾಯಕ ಎನಿಸಿಕೊಂಡಿದ್ದ ಲಿಂಬಾವಳಿ ಅವರು ಕೊನೆಗೂ ತಮ್ಮ ಸಂಘಟನಾ ಸ್ವಾರ್ಮಥ್ಯವನ್ನು ಪಕ್ಷದ ರಾಷ್ಟ್ರೀಯ ನಾಯಕತ್ವಕ್ಕೆ ಪರಿಚಯಿಸುವಲ್ಲಿ ಕೂಡಾ ಯಶಸ್ವಿಯಾಗಿದ್ದಾರೆ. ತೆಲಂಗಾಣದ ಪಕ್ಷದ ಸಾಧನೆ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್‌ ಲಿಂಬಾವಳಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ತಿಳಿದು ಬಂದಿದೆ.

ಕೆಲ ತಿಂಗಳ ಹಿಂದಷ್ಟೆಅವಧಿಗೂ ಮುನ್ನವೇ ವಿಧಾನಸಭಾ ಚುನಾವಣೆ ಎದುರಿಸಿ ಭರ್ಜರಿ ಜಯ ದಾಖಲಿಸಿದ್ದ ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಅವರು ಅದೇ ವಿಜಯ ಯಾತ್ರೆಯನ್ನು ಲೋಕಸಭೆ ಚುನಾವಣೆಯಲ್ಲೂ ಮುಂದುವರೆಸಿ ರಾಷ್ಟ್ರ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರವಹಿಸುವ ಮಹಾತ್ವಾಕಾಂಕ್ಷೆ ಹೊತ್ತಿದ್ದರು. ಆದರೆ ಲಿಂಬಾವಳಿ ಅವರ ಹೆಣೆದೆ ರಾಜಕೀಯ ತಂತ್ರಗಾರಿಕೆಯಿಂದ ಟಿಆರ್‌ಎಸ್‌ ಕನಸು ಭಗ್ನವಾಯಿತು. ಅಲ್ಲದೆ ಸ್ವತಃ ಮುಖ್ಯಮಂತ್ರಿಗಳ ಪುತ್ರಿಯೇ ಬಿಜೆಪಿ ಎದುರು ಸೋಲುವಂತಾಯಿತು.

ಕಳೆದ ಚುನಾವಣೆಯಲ್ಲಿ 17 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಬಿಜೆಪಿ, ಈ ಬಾರಿ ನಾಲ್ಕು ಸ್ಥಾನಕ್ಕೆ ಜಿಗಿದಿದೆ. ಆದರೆ ಆರು ತಿಂಗಳ ಹಿಂದೆ ವಿಧಾನಸಭೆಯಲ್ಲಿ ಶೂನ್ಯ ಸಾಧನೆ ಮಾಡಿದ್ದ ಪಕ್ಷಕ್ಕೆ ಲೋಕಸಭಾ ಚುನಾವಣೆ ಸವಾಲಾಗಿ ಪರಿಣಮಿಸಿತ್ತು. ಇತ್ತ ತೆಲಗಾಂಣದಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಾಯಕರು, ಸಂಘಟನಾ ಚತುರ ಹಾಗೂ ಸಂಘ ಪರಿವಾರದ ಹಿನ್ನೆಲೆಯುಳ್ಳ ಅರವಿಂದ ಲಿಂಬಾವಳಿ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿದ್ದರು.

ರಾಜ್ಯ ಉಸ್ತುವಾರಿಯಾದ ನಂತರ ಸ್ಥಳೀಯ ನಾಯಕರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡ ಲಿಂಬಾವಳಿ ಅವರು, ಚುನಾವಣೆಯನ್ನು ಗೆಲ್ಲಲು ಬೇಕಾದ ಕಾರ್ಯತಂತ್ರ ರೂಪಿಸಿದ್ದರು. ಆ ರಾಜ್ಯದಲ್ಲೂ ಬೀಸಲಾರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಪರ ಅಲೆಯನ್ನು ಮತಗಳಾಗಿ ಪರಿವರ್ತಿಸಿದರು. ಈ ರಾಜಕೀಯ ತಂತ್ರಗಾರಿಕೆ ಫಲವಾಗಿ ನಿಜಾಮಾಬಾದ್‌ ಹಾಲಿ ಸಂಸದೆಯೂ ಆಗಿದ್ದ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಅವರ ಪುತ್ರಿ ಕವಿತಾ ಅವರಿಗೆ ನಿಜಾಮಾಬಾದ್‌ನಲ್ಲಿ ಬಿಜೆಪಿಯ ಅರವಿಂದ್‌ ಧರ್ಮಪುರ್‌ ಸೋಲಿನ ರುಚಿ ಉಣಿಸಿದ್ದಾರೆ. ಅಲ್ಲದೆ, ಕರೀಂ ನಗರ ಕ್ಷೇತ್ರದಿಂದ ಬಂಡಿ ಸಂಜಯ್‌ ಕುಮಾರ್‌, ಅದಿಲ್‌ಬಾದ್‌ನಲ್ಲಿ ಸೋಯಂ ಬಾಪುರಾವ್‌ ಹಾಗೂ ಸಿಕಂದರಾಬಾದ್‌ನಲ್ಲಿ ಜಿ.ಕಿಶನ್‌ ರೆಡ್ಡಿ ವಿಜಯ ಪಾತಕೆ ಹಾರಿಸಿದ್ದಾರೆ. ಈ ಗೆಲುವಿನ ಹಿಂದೆ ನರೇಂದ್ರ ಮೋದಿ ಮತ್ತು ಅಮಿತ್‌ ಷಾ ಅವರ ಪ್ರಚಾರ ಸಹ ಕೆಲಸ ಮಾಡಿದೆ.

ಇದಲ್ಲದೆ ಕೋಲಾರ ಕ್ಷೇತ್ರದಲ್ಲೂ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಕೆ.ಎಚ್‌.ಮುನಿಯಪ್ಪ ಅವರನ್ನು ಮಣಿಸುವಲ್ಲಿ ಸಹ ಲಿಂಬಾವಳಿ ಪಾತ್ರ ವಹಿಸಿದ್ದಾರೆ. ತಮ್ಮ ಬೆಂಬಲಿಗ ಹಾಗೂ ನಗರದ ಕಾಡುಗೋಡಿಯ ಬಿಬಿಎಂಪಿ ಸದಸ್ಯ ಮುನಿಸ್ವಾಮಿ ಅವರಿಗೆ ಬಿಜೆಪಿ ಟಿಕೆಟ್‌ ಕೊಡಿಸುವಲ್ಲಿ ಲಿಂಬಾವಳಿ ಪ್ರಮುಖ ಪಾತ್ರವಹಿಸಿದ್ದರು.