ಬೆಂಗಳೂರು :  ಉತ್ತರ ಭಾರತದ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ ಪಕ್ಷ ಜಯಭೇರಿ ಬಾರಿಸಿ ಅಧಿಕಾರದ ಗದ್ದುಗೆ ಏರಿದ ಬೆನ್ನಲ್ಲೇ ಕರ್ನಾಟಕದಲ್ಲಿನ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳ ನಡುವೆ ಸಣ್ಣದಾಗಿ ತಿಕ್ಕಾಟ ಆರಂಭವಾಗತೊಡಗಿದೆ.

ಮಹಾಗಠಬಂಧನ್‌ ಮೂಲಕ ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಜಂಟಿಯಾಗಿ ಅಭ್ಯರ್ಥಿ ಕಣಕ್ಕಿಳಿಸುವ ನಿಲುವಿಗೆ ಬಂದಿದ್ದರೂ ಕಾಂಗ್ರೆಸ್‌ ಪಕ್ಷ ಗೌರವಯುತವಾಗಿ ಸ್ಥಾನಗಳನ್ನು ಬಿಟ್ಟುಕೊಡುವ ಬಗ್ಗೆ ಜೆಡಿಎಸ್‌ ಪಾಳೆಯದಲ್ಲಿ ಅನುಮಾನ ಕಾಣಿಸತೊಡಗಿದೆ.

ಒಂದು ವೇಳೆ ನಿರ್ದಿಷ್ಟಸ್ಥಾನಗಳನ್ನು ಬಿಟ್ಟುಕೊಡದೇ ಕಾಂಗ್ರೆಸ್‌ ಮೇಲುಗೈ ಸಾಧಿಸಲು ಮುಂದಾದಲ್ಲಿ ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ‘ಫ್ರೆಂಡ್ಲಿ ಫೈಟ್‌’ ಮಾಡಿದರಾಯಿತು ಎಂದು ಜೆಡಿಎಸ್‌ ನಾಯಕರು ಗಂಭೀರ ಚಿಂತನೆ ನಡೆಸತೊಡಗಿದ್ದಾರೆ.

ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯದಲ್ಲೂ ಕಾಂಗ್ರೆಸ್ಸಿನ ಕೆಲವು ನಾಯಕರ ನಡವಳಿಕೆ ಬದಲಾಗಿದೆ. ಇದರ ಪರಿಣಾಮವೇ ಕೆಲವು ಪ್ರಮುಖ ನಿಗಮ ಮಂಡಳಿಗಳ ನೇಮಕ ಕುರಿತ ನಿರ್ಧಾರ ಕೈಗೊಳ್ಳುವಲ್ಲಿ ಕಾಂಗ್ರೆಸ್‌ ನಾಯಕರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್‌ ನಾಯಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದು ಮುಂದುವರೆದು ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ನಿರ್ದಿಷ್ಟಸಂಖ್ಯೆಯ ಲೋಕಸಭಾ ಸ್ಥಾನಗಳನ್ನು ಬಿಟ್ಟುಕೊಡಲು ಕಾಂಗ್ರೆಸ್‌ ಒಪ್ಪದೇ ಇದ್ದಲ್ಲಿ ಸ್ವಂತಿಕೆ ಕೈಬಿಟ್ಟು ಶರಣಾಗುವುದರಲ್ಲಿ ಅರ್ಥವಿಲ್ಲ. ಕಳೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಡೆದಂತೆ ಲೋಕಸಭಾ ಚುನಾವಣೆಯಲ್ಲೂ ‘ಫ್ರೆಂಡ್ಲಿ ಫೈಟ್‌’ ಮಾಡೋಣ ಎಂಬ ಸಲಹೆಯನ್ನು ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷದ ವರಿಷ್ಠ ನಾಯಕ ಎಚ್‌.ಡಿ.ದೇವೇಗೌಡ ಅವರಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ದೇವೇಗೌಡರು ಇತ್ತೀಚೆಗೆ ಸುಮಾರು ಎಂಟು ಜಿಲ್ಲೆಗಳ ಹಿರಿಯ ಮುಖಂಡರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಅನೇಕ ಮುಖಂಡರು ನಮ್ಮ ಪಕ್ಷದ ಸ್ವಂತಿಕೆ ಬಿಟ್ಟುಕೊಟ್ಟು ಕಾಂಗ್ರೆಸ್ಸಿಗೆ ಸಂಪೂರ್ಣ ಮಣೆ ಹಾಕುವ ಅಗತ್ಯವಿಲ್ಲ. ನಮ್ಮ ಪಕ್ಷಕ್ಕೂ ಸ್ವಂತಿಕೆ ಇದೆ. ಅನೇಕ ಭಾಗಗಳಲ್ಲಿ ಪ್ರಾಬಲ್ಯ ಹೊಂದಿದೆ. ಕಾಂಗ್ರೆಸ್‌ ಗೌರವಯುತವಾಗಿ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸೋಣ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಎಂದು ಪಕ್ಷದ ವಕ್ತಾರ ರಮೇಶ್‌ಬಾಬು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.