Asianet Suvarna News Asianet Suvarna News

ಡಿಕೆಸು ವಿರುದ್ಧ ಕಣಕ್ಕೆ ಇಳಿಯುವ ಪ್ರಬಲ ಬಿಜೆಪಿ ಅಭ್ಯರ್ಥಿ ಯಾರು..?

ಸಚಿವ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ವಿರುದ್ಧವಾಗಿ ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ಕಣಕ್ಕೆ ಇಳಿಸಲು ಸಂಘ ಪರಿವಾರ ಸಜ್ಜಾಗುತ್ತಿದೆ. 

Lok Sabha Election 2019 Who Is The opposite Candidate Of DK Suresh
Author
Bengaluru, First Published Mar 8, 2019, 11:13 AM IST

ಬೆಂಗಳೂರು :  ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಸಹೋದರ ಡಿ.ಕೆ.ಸುರೇಶ್‌ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವ ಬಗ್ಗೆ ರಾಜ್ಯ ಬಿಜೆಪಿ ನಾಯಕರ ಪೈಕಿ ಕೆಲವರು ಮೃದು ಧೋರಣೆ ತಳೆಯುತ್ತಿರುವ ವಾಸನೆ ಹಿಡಿದಿರುವ ಸಂಘ ಪರಿವಾರ ಆ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಈ ಬಾರಿಯ ಚುನಾವಣೆಯಲ್ಲಿ ತಮ್ಮ ಸಹೋದರ ಸುರೇಶ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗಳಿಸುವ ಮತಗಳಿಗಿಂತ ಹೆಚ್ಚಿನ ಅಂತರದಲ್ಲಿ ಗೆಲ್ಲಿಸಿಕೊಂಡು ಬರುವುದಾಗಿ ಸಚಿವ ಶಿವಕುಮಾರ್‌ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾದ ಮಾತು ಸಂಘ ಪರಿವಾರದ ಮುಖಂಡರನ್ನೂ ತಲುಪಿರುವುದೇ ಇದಕ್ಕೆ ಕಾರಣ.

ಶಿವಕುಮಾರ್‌ ಅವರೊಂದಿಗೆ ರಾಜ್ಯ ಬಿಜೆಪಿಯ ಹಲವು ಹಿರಿಯ ನಾಯಕರು ಆತ್ಮೀಯ ಸಂಬಂಧ ಹೊಂದಿರುವುದು ಗುಟ್ಟಿನ ವಿಷಯವೇನಲ್ಲ. ಹೀಗಾಗಿಯೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಗೆಲ್ಲಲು ಸಾಧ್ಯವಾಗದಿದ್ದರೂ ಕನಿಷ್ಠ ಸುರೇಶ್‌ ಅವರಿಗೆ ಪ್ರಬಲ ಪೈಪೋಟಿ ಒಡ್ಡಬೇಕು ಎಂಬ ಭಾವನೆಯೂ ರಾಜ್ಯ ಬಿಜೆಪಿಯಲ್ಲಿ ಕಾಣುತ್ತಿಲ್ಲ. ಪಕ್ಷದ ರಾಮನಗರ ಜಿಲ್ಲಾಧ್ಯಕ್ಷ ಎಂ.ರುದ್ರೇಶ್‌ ಅವರನ್ನು ಕಣಕ್ಕಿಳಿಸುವ ಬಗ್ಗೆ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್ಸಿನ ಸುರೇಶ್‌ ಅವರಿಗೆ ರುದ್ರೇಶ್‌ ಅವರಿಂದ ಪ್ರಬಲ ಸ್ಪರ್ಧೆ ಒಡ್ಡುವುದು ಸಾಧ್ಯವಾಗಲಿಕ್ಕಿಲ್ಲ ಎಂಬ ಅನಿಸಿಕೆ ಹೊರಬಿದ್ದಿದೆ.

ಮೇಲಾಗಿ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವುದರಿಂದ ಸಚಿವ ಶಿವಕುಮಾರ್‌ ಅವರನ್ನು ಕಟ್ಟಿಹಾಕುವುದು ಅಸಾಧ್ಯವಾಗುತ್ತದೆ. ಸಹೋದರ ಸುರೇಶ್‌ಗೆ ದಾಖಲೆಯ ಗೆಲುವು ಕೇಕ್‌ ವಾಕ್‌ ಆಗಲಿದೆ. ಅದರ ಬದಲು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಶಿವಕುಮಾರ್‌ ಅವರು ರಾಜ್ಯಾದ್ಯಂತ ಹೆಚ್ಚು ಪ್ರವಾಸ ಮಾಡದಂತೆ ಕಟ್ಟಿಹಾಕುವ ಪ್ರಯತ್ನ ಮಾಡಬೇಕು ಎಂಬ ಸಲಹೆಯನ್ನು ಸಂಘ ಪರಿವಾರದ ಮುಖಂಡರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸಂಘ ಪರಿವಾರದ ಮುಖಂಡರು ಈ ಬಗ್ಗೆ ಪಕ್ಷದ ಹೈಕಮಾಂಡ್‌ ಗಮನಕ್ಕೂ ತರುವ ಸಾಧ್ಯತೆಯಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ವರಿಷ್ಠರೇ ಸೂಕ್ತ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಇದೆಲ್ಲದರ ಜೊತೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಅಥವಾ ರಾಮನಗರ ಜಿಲ್ಲೆಯಲ್ಲಿನ ವಿಧಾನಸಭಾ ಕ್ಷೇತ್ರಗಳ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ ರಾಜ್ಯ ನಾಯಕರು ಮಾತ್ರ ಪ್ರಚಾರವನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ ಎಂಬ ದೂರು ಮತ್ತು ಬೇಸರವನ್ನು ಈ ಹಿಂದೆ ಕಣಕ್ಕಿಳಿದು ಸೋಲು ಅನುಭವಿಸಿರುವ ಅಭ್ಯರ್ಥಿಗಳು ವ್ಯಕ್ತಪಡಿಸುತ್ತಾರೆ.

ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಪಿ.ಮುನಿರಾಜುಗೌಡ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡರೂ ಹೆಚ್ಚಿನ ಮತಗಳನ್ನು ಗಳಿಸಿದ್ದರು. ಅದೇ ರೀತಿ ಅದಕ್ಕೂ ಮೊದಲು 2009ರ ಲೋಕಸಭಾ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್‌ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದರೂ ಹೆಚ್ಚು ಮತಗಳನ್ನು ಗಳಿಸಿದ್ದರು. ಅವರಿಗೆ ಪಕ್ಷದ ರಾಜ್ಯ ನಾಯಕರು ಸಹಕಾರ ನೀಡಿ ಸಕ್ರಿಯವಾಗಿ ಪ್ರಚಾರ ಹಾಗೂ ತಂತ್ರಗಾರಿಕೆ ಕೈಗೊಂಡಿದ್ದಲ್ಲಿ ಇನ್ನೂ ಹೆಚ್ಚು ಮತಗಳನ್ನು ಗಳಿಸುವ ಸಾಧ್ಯತೆ ಸ್ಪಷ್ಟವಾಗಿತ್ತು. ಆದರೆ, ರಾಜ್ಯ ಬಿಜೆಪಿಯ ಕೆಲವು ಹಿರಿಯ ನಾಯಕರು ಈ ಕ್ಷೇತ್ರದಲ್ಲಿನ ಪ್ರಚಾರದಿಂದ ಅಂತರವನ್ನೇ ಕಾಪಾಡಿಕೊಂಡರು. ಇನ್ನು ಕೆಲವರು ಪ್ರಚಾರಕ್ಕೆ ಬರುತ್ತೇನೆ ಎಂದು ಹೇಳಿ ಕೊನೆಯ ಕ್ಷಣದಲ್ಲಿ ಕೈಕೊಟ್ಟರು ಎಂಬುದು ಬಿಜೆಪಿ ಪಾಳೆಯದಿಂದಲೇ ಹೊರಬಿದ್ದಿರುವ ಸುದ್ದಿ.

Follow Us:
Download App:
  • android
  • ios