ಬೆಂಗಳೂರು (ಜೂ. 01): ಕಾಡ್ಗಿಚ್ಚಿನಿಂದಾಗಿ ಅರಣ್ಯ, ಪ್ರಾಣಿ ಮತ್ತು ಪಕ್ಷಿ ಸಂಕುಲದ ಹಾನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಂಪೂರ್ಣ ಜವಾಬ್ದಾರರು ಎಂದು ಹೈಕೋರ್ಟ್‌ ಆದೇಶಿಸಿದೆ.

ಕೊಡಗು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪ್ರತಿ ವರ್ಷ ಸಂಭವಿಸುವ ಕಾಡ್ಗಿಚ್ಚು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಕಾಡಿಗೆ ಬೆಂಕಿ ಬೀಳದಂತೆ ಅರಣ್ಯ ರಕ್ಷಣೆ ಮಾಡಲು ಪ್ರತ್ಯೇಕ ಕಾರ್ಯಪಡೆ ರಚಿಸಲು ನಿರ್ದೇಶಿಸುವಂತೆ ಕೋರಿ ಮಡಿಕೇರಿ ತಾಲೂಕು ಕಾಟಕೇರಿ ಗ್ರಾಮದ ನಿವಾಸಿ ಕೆ.ಎ.ರವಿ ಚೆಂಗಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ರಾಜ್ಯದ ಎಲ್ಲ ಅರಣ್ಯ ವಲಯಗಳಲ್ಲಿ ಕಾಡ್ಗಿಚ್ಚು ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ತಕ್ಷಣವೇ ಮುಂದಾಗಬೇಕು. ಅದಕ್ಕಾಗಿ ಎಲ್ಲ ಇಲಾಖೆಗಳ ಸಹಕಾರ ಪಡೆಯಬೇಕು. ಕಾಡ್ಗಿಚ್ಚಿನಿಂದ ಅರಣ್ಯ, ಪ್ರಾಣಿ ಮತ್ತು ಪಕ್ಷಿ ಸಂಕುಲದ ಹಾನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಂಪೂರ್ಣ ಜವಾಬ್ದಾರಿ ಹೊರಬೇಕು ಎಂದು ಆದೇಶಿಸಿದರು.

ಅಲ್ಲದೆ, ಅರಣ್ಯ ಸಂರಕ್ಷಣೆಗೆ ಸ್ಥಳೀಯರನ್ನು ಒಳಗೊಂಡ ಅಧಿಕಾರಿಗಳ ತಂಡ ರಚಿಸಬೇಕು. ಕೊಡಗು ಜಿಲ್ಲೆಗೆ ಅನ್ವಯ ಆಗುವಂತೆ ಈ ತಂಡದಲ್ಲಿ ಅರ್ಜಿದಾರ ಕೆ.ವಿ.ರವಿ ಚೆಂಗಪ್ಪ ಅವರನ್ನೂ ಸೇರ್ಪಡೆ ಮಾಡಬೇಕು ಎಂದು ನ್ಯಾಯಪೀಠ ಇದೇ ವೇಳೆ ಆದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

ಅರ್ಜಿಯೇನು:

ಕೊಡಗು ಜಿಲ್ಲೆಯಲ್ಲಿ ಕಾಡ್ಗಿಚ್ಚು ಘಟನೆ ಹೆಚ್ಚಾಗುತ್ತಿವೆ. ಕೆಲವೊಮ್ಮ ನೈಸರ್ಗಿಕವಾಗಿ ಕಾಡ್ಗಿಚ್ಚು ಸಂಭವಿಸಿದರೆ, ಹಲವು ಬಾರಿ ದುಷ್ಕರ್ಮಿಗಳು ಕಾಡಿಗೆ ಬೆಂಕಿ ಹಾಕುತ್ತಾರೆ. ಕಳೆದ ಐದಾರು ವರ್ಷಗಳಿಂದ ಜನವರಿಯಿಂದ ಜೂನ್‌ ತಿಂಗಳ ನಡುವೆ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಕಾಡಿಗೆ ಬೆಂಕಿ ಹಾಕುವ ಪರಿಣಾಮ ಹೆಕ್ಟೆರುಗಟ್ಟಲೆ ಅರಣ್ಯ ನಾಶವಾಗುತ್ತಿದೆ.

2017 ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಸಂಭವಿಸಿದ ಕಾಡ್ಗಿಚ್ಚಿಗೆ ಕುಶಾಲನಗರ, ಸುಂಠಿಕೊಪ್ಪ ಸುತ್ತಲಿನ 150 ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

ಅಲ್ಲದೆ, ಕಾಡ್ಗಿಚ್ಚು ತಡೆಗೆ ಅಗತ್ಯ ಕ್ರಮ ಜರುಗಿಸುವಂತೆ ಕೋರಿ ಸಂಬಂಧಪಟ್ಟವರಿಗೆ ಸಾಕಷ್ಟುಬಾರಿ ಮನವಿ ಮಾಡಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಆದ್ದರಿಂದ ಕಾಡ್ಗಿಚ್ಚಿನಿಂದ ಅರಣ್ಯ ಪ್ರದೇಶ, ವನ್ಯಜೀವಿಗಳನ್ನು ರಕ್ಷಿಸಲು ವಿಶೇಷ ಕಾರ್ಯಪಡೆ ರಚಿಸುವಂತೆ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಎಚ್ಚೆತ್ತುಕೊಳ್ಳಲು ಕೊನೆಯ ಅವಕಾಶ

ಪ್ರಸ್ತುತ ಮನುಷ್ಯ ತನ್ನ ಎಲ್ಲೆಯನ್ನು ಮೀರಿದ್ದಾನೆ. ವನ್ಯಜೀವಿ ಮತ್ತು ಮಾನವ ಸಂಘರ್ಷ ಹೆಚ್ಚುತ್ತಿದೆ. ಇದು ಅಪಾಯಕಾರಿ ಮುನ್ಸೂಚನೆ. ಈಗಲಾದರೂ ಎಚ್ಚೆತ್ತುಕೊಳ್ಳದೇ ಹೋದರೆ ಭವಿಷ್ಯದಲ್ಲಿ ಮಾನವನ ಅಸ್ತಿತ್ವವೇ ಇಲ್ಲದಂತಾಗುತ್ತದೆ. ಆದ್ದರಿಂದ ಪ್ರಕೃತಿ ಸಂರಕ್ಷಣೆಗೆ ಎಲ್ಲ ಸುಶಿಕ್ಷಿತರು ಮತ್ತು ಅನಕ್ಷರಸ್ಥರೂ ಸೇರಿದಂತೆ ಸಮಸ್ತ ಜನತೆ ಕಟಿಬದ್ಧರಾಗಬೇಕಿದೆ. ಅದಕ್ಕೆ ಇದೀಗ ಕಾಲ ಕೂಡಿ ಬಂದಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಎಚ್ಚರಿಸಿದೆ.