ರಾಜ್ಯದಲ್ಲಿ ಲೋಕಲ್ ಸಮರ ಏರ್ಪಡುತ್ತಿದೆ. ರಾಜ್ಯದ ರಾಜ್ಯದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಗೊಂಡ ನಂತರ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿರುವುದರಿಂದ ಮಹತ್ವ ಪಡೆದುಕೊಂಡಿದೆ. 

ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಯ ‘ಲಿಟ್ಮಸ್‌ ಟೆಸ್ಟ್‌’ ಎಂದೇ ರಾಜಕೀಯ ವಲಯದಲ್ಲಿ ಕರೆಯಲ್ಪಡುತ್ತಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ.

ರಾಜ್ಯದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಗೊಂಡ ನಂತರ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿರುವುದರಿಂದ ಮಹತ್ವ ಪಡೆದುಕೊಂಡಿದೆ. ಮಿತ್ರ ಪಕ್ಷಗಳಲ್ಲಿನ ಆಂತರಿಕ ತಿಕ್ಕಾಟ ಮತ್ತು ಪ್ರತಿಪಕ್ಷ ಬಿಜೆಪಿಯ ಅಬ್ಬರ ಈ ಚುನಾವಣೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯ ಮೂರು ಮಹಾನಗರ ಪಾಲಿಕೆ ಸೇರಿದಂತೆ 21 ಜಿಲ್ಲೆಗಳ 29 ನಗರ ಸಭೆಗಳು, 53 ಪುರಸಭೆಗಳು ಮತ್ತು 20 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದೆ.

ಸೆ.3ರಂದು (ಸೋಮವಾರ) ಮತ ಎಣಿಕೆ ಕಾರ್ಯವು ಬೆಳಗ್ಗೆ 8 ಗಂಟೆಯಿಂದ ಆರಂಭಗೊಳ್ಳಲಿದೆ. ಮಹಾನಗರ ಪಾಲಿಕೆಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಕೇಂದ್ರಗಳಲ್ಲಿ, ಮತ್ತು ಇತರೆ ನಗರ ಸಂಸ್ಥೆಗಳಿಗೆ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.

ಒಟ್ಟು ಅಂತಿಮವಾಗಿ 9121 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್‌ ಚುನಾವಣೆಯಲ್ಲಿ 8307 ಮಂದಿ ಮತ್ತು ಶಿವಮೊಗ್ಗ, ಮೈಸೂರು, ತುಮಕೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ 814 ಮಂದಿ ಅಂತಿಮವಾಗಿ ಅಖಾಡದಲ್ಲಿದ್ದಾರೆ. ನಗರಸಭೆಗಳ 12 ವಾರ್ಡ್‌ ಮತ್ತು ಪುರಸಭೆಗಳಿಂದ 17 ವಾರ್ಡ್‌ಗಳಿಗೆ ಒಟ್ಟು 29 ಅಭ್ಯರ್ಥಿಗಳು ಈಗಾಗಲೇ ಅವಿರೋಧ ಆಯ್ಕೆಯಾಗಿದ್ದಾರೆ.

ನೆರೆ ಪರಿಸ್ಥಿತಿ ತಲೆದೋರಿದ ಪರಿಣಾಮ ಕೊಡಗು ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗಳ ಚುನಾವಣೆಯನ್ನು ರದ್ದುಗೊಳಿಸಲಾಗಿದೆ. ಇದಲ್ಲದೇ, ಕಲಬುರಗಿ ಜಿಲ್ಲೆಯ ಅಫ್ಜಲ್‌ಪುರ ಪುರಸಭೆಯ ವಾರ್ಡ್‌ ನಂ.10ರ ಎಲ್ಲಾ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾದ್ದರಿಂದ ಮತ್ತು ಕೊಳ್ಳೇಗಾಲ ನಗರ ಸಭೆಯ ವಾರ್ಡ್‌ ನಂ.9ರಲ್ಲಿ ಸ್ಪರ್ಧಿಸಿದ್ದ ಬಿಎಸ್‌ಪಿ ಅಭ್ಯರ್ಥಿ ಸಿ.ಎಸ್‌.ರಮೇಶ್‌ ನಿಧನದಿಂದ ಆ ವಾರ್ಡ್‌ ಚುನಾವಣೆಯನ್ನು ರದ್ದುಪಡಿಸಲಾಗಿದೆ.

ಪುರಸಭೆ, ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 36 ಲಕ್ಷಕ್ಕಿಂತ ಹೆಚ್ಚು ಮತದಾರರಿದ್ದು, ಈ ಪೈಕಿ 17 ಲಕ್ಷಕ್ಕಿಂತ ಹೆಚ್ಚು ಪುರುಷರು, 18 ಲಕ್ಷಕ್ಕಿಂತ ಹೆಚ್ಚು ಮಹಿಳೆಯರು ಮತ್ತು 300ಕ್ಕಿಂತ ಅಧಿಕ ಇತರೆ ಮತದಾರರಿದ್ದಾರೆ. ನಗರಸಭೆ ಚುನಾವಣೆಗೆ 2,067 ಮತಗಟ್ಟೆಗಳನ್ನು ಸ್ಥಾಪಿಸಿದರೆ, ಪುರಸಭೆ ಚುನಾವಣೆಗೆ 1,422 ಮತಗಟ್ಟೆಗಳನ್ನು ಮತ್ತು ಪಟ್ಟಣ ಪಂಚಾಯಿತಿ ಚುನಾವಣೆಗೆ 400ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಏಳು ಐಎಎಸ್‌ ಅಧಿಕಾರಿಗಳನ್ನು ವಿಶೇಷ ವೀಕ್ಷಕರನ್ನಾಗಿ, 256 ಹಿರಿಯ ಕೆಎಎಸ್‌ ಅಧಿಕಾರಿಗಳನ್ನು ಸಾಮಾನ್ಯ ವೀಕ್ಷಕರಾಗಿ ಮತ್ತು 30 ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಜಂಟಿ ನಿಯಂತ್ರಕರು ಮತ್ತು ನಿಯಂತ್ರಕರನ್ನು ಚುನಾವಣಾ ವೆಚ್ಚ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಚುನಾವಣೆಗೆ ಪೊಲೀಸ್‌ ಸಿಬ್ಬಂದಿ ಸೇರಿದಂತೆ 40 ಸಾವಿರ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.

ಇನ್ನು, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 135 ವಾರ್ಡ್‌ಗಳಿದ್ದು, 1,284 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 13,33,153 ಜನಸಂಖ್ಯೆ ಇದ್ದು, ಈ ಪೈಕಿ 6,66,136 ಪುರುಷರು, 6,66,864 ಮಹಿಳೆಯರು ಮತ್ತು 153 ಇತರರು ಇದ್ದಾರೆ. ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 65 ವಾರ್ಡ್‌ಗಳಿದ್ದು, 725 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಒಟ್ಟು 7,99,422 ಜನಸಂಖ್ಯೆ ಇದ್ದು, ಇದರಲ್ಲಿ 4,01,730 ಪುರುಷರು, 3,97,594 ಮಹಿಳೆಯರು ಮತ್ತು 98 ಇತರರಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 35 ವಾರ್ಡ್‌ಗಳಿದ್ದು, 288 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1,534 ಬ್ಯಾಲೆಟ್‌ ಯೂನಿಟ್‌ಗಳನ್ನು ಮತ್ತು 1,534 ಕಂಟ್ರೋಲ್‌ ಯೂನಿಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ.

ಮೊದಲ ಬಾರಿಗೆ ನೋಟಾ, ಭಾವಚಿತ್ರ ಮತಪತ್ರ

ರಾಜ್ಯ ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ‘ನೋಟಾ’ ಮತ್ತು ಅಭ್ಯರ್ಥಿಗಳ ಭಾವಚಿತ್ರ ಇರುವ ಮತ ಪತ್ರದ ವ್ಯವಸ್ಥೆ ಮಾಡಲಾಗಿದೆ. ಮತಪತ್ರದಲ್ಲಿ ಕೊನೆಯ ಅಭ್ಯರ್ಥಿ ನಂತರ ನೋಟಾವನ್ನು ಮುದ್ರಿಸುವ ವ್ಯವಸ್ಥೆ ಮಾಡಲಾಗಿದೆ. ಮತದಾರರು ಯಾರಿಗೂ ಮತ ನೀಡಲು ಇಚ್ಛಿಸದಿದ್ದಲ್ಲಿ ‘ನೋಟಾ’ಗೆ ಮತ ಚಲಾಯಿಸಬಹುದಾಗಿದೆ. ಅಲ್ಲದೇ, ಚುನಾವಣೆಯಲ್ಲಿ ಒಂದೇ ವಾರ್ಡ್‌ನಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳು ಸ್ಪರ್ಧಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಮತದಾರರನ್ನು ಗೊಂದಲಕ್ಕೀಡು ಮಾಡಲಿದೆ. ಹೀಗಾಗಿ ಮತಪತ್ರದಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರ ಮುದ್ರಿಸುವಂತೆ ಕ್ರಮ ಕೈಗೊಳ್ಳಲಾಗಿದೆ.