ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಹೊರಬೀಳುತ್ತಿದೆ. ವಿವಿಧ ಕಡೆ ಮತ ಎಣಿಕೆ ಕಾರ್ಯ ಆರಂಭವಾಗಿದೆ. 11 ಗಂಟೆ ವೇಳೆಗೆ ಫಲಿತಾಂಶ ಹೊರ ಬೀಳಲಿದೆ.
ಬೆಂಗಳೂರು : ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಒಂದು ಸಣ್ಣ ಅಗ್ನಿ ಪರೀಕ್ಷೆಯಂತಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದೆ.
ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತಂತೆ ನಿರ್ಧಾರಕ್ಕೆ ಬಂದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಚುನಾವಣೆಯಲ್ಲಿ ಪ್ರತ್ಯೇಕವಾಗಿಯೇ ಹೋರಾಟ ನಡೆಸಿದ್ದರೂ ಫಲಿತಾಂಶದ ನಂತರ ಅಧಿಕಾರಕ್ಕಾಗಿ ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ನಿರ್ಣ ಯ ಕೈಗೊಂಡಿವೆ.
ಆದರೆ, ಫಲಿತಾಂಶದ ನಂತರ ಉಭಯ ಪಕ್ಷಗಳ ನಡುವೆ ಎಷ್ಟರ ಮಟ್ಟಿಗೆ ಹೊಂದಾಣಿಕೆ ಆಗುತ್ತದೆ, ತಿಕ್ಕಾಟ ಆಗುತ್ತದೆ ಎಂಬುದನ್ನು ಕಾದು ನೋಡಬೇಕು. ಜೊತೆಗೆ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಗೂ ಈ ಚುನಾವಣೆಯ ಫಲಿತಾಂಶ ಮುಖ್ಯವಾಗಿದೆ. ದೊಡ್ಡ ಪಕ್ಷ ಎಂಬ ಹೆಗ್ಗಳಿಕೆಯನ್ನು ಉಳಿಸಿ ಕೊಳ್ಳಬೇಕಾದ ಅನಿವಾರ್ಯತೆಯಿದ್ದು, ಜನರ ಒಲವು ಬದಲಾಗಿಲ್ಲ ಎಂಬುದನ್ನೂ ಈ ಚುನಾವಣೆಯಲ್ಲಿ ನಿರೂಪಿಸ ಬೇಕಿದೆ.
ಮಹಾನಗರ ಪಾಲಿಕೆಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಕೇಂದ್ರಗಳಲ್ಲಿ, ಮತ್ತು ಇತರೆ ನಗರ ಸಂಸ್ಥೆಗಳಿಗೆ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಮತ ಎಣಿಕೆ ಕಾರ್ಯ ಬೆಳಗ್ಗೆಯಿಂದಲೇ ಪ್ರಾರಂಭವಾಗಿದೆ. ಸುಮಾರು 11 ಗಂಟೆ ವೇಳೆಗೆ ಸಂಪೂರ್ಣ ಫಲಿತಾಂಶ ಹೊರ ಬೀಳಲಿದೆ.
ಚುನಾವಣೆಯಲ್ಲಿ ಅಂತಿಮವಾಗಿ ಒಟ್ಟು 9,121 ಅಭ್ಯರ್ಥಿಗಳು ಕಣದಲ್ಲಿದ್ದರು. ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ 8,307 ಮಂದಿ ಮತ್ತು ಶಿವಮೊಗ್ಗ, ಮೈಸೂರು, ತುಮಕೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ 814 ಮಂದಿ ಅಂತಿಮವಾಗಿ ಅಖಾಡದಲ್ಲಿ ದ್ದರು.
ನಗರಸಭೆಗಳ 12 ವಾರ್ಡ್ ಮತ್ತು ಪುರಸಭೆಗಳಿಂದ 17 ವಾರ್ಡ್‌ಗಳಿಗೆ ಒಟ್ಟು 29 ಅಭ್ಯರ್ಥಿಗಳು ಈಗಾಗಲೇ ಅವಿರೋಧ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಗೊಂಡ ನಂತರ ಇದೇ ಮೊದಲ ಬಾರಿ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದ್ದು, ಫಲಿತಾಂಶ ಅತ್ಯಂತ ಕುತೂಹಲ ಮೂಡಿಸಿದೆ.
ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯ ಮೂರು ಮಹಾನಗರ ಪಾಲಿಕೆ ಸೇರಿದಂತೆ 21 ಜಿಲ್ಲೆಗಳ 29 ನಗರ ಸಭೆಗಳು, 53 ಪುರಸಭೆಗಳು ಮತ್ತು 20 ಪಟ್ಟಣ ಪಂಚಾಯಿತಿಗಳಿಗೆ ಶುಕ್ರವಾರ ಮತದಾನ ನಡೆದಿತ್ತು.
