ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಏಳು ತಿಂಗಳ ಅವಧಿ ಉಳಿದಿರುವ ಈ ಹಂತದಲ್ಲಿ ರಾಜ್ಯದಲ್ಲಿ ಲಿಂಗಾಯತ ಹಾಗೂ ದಲಿತ ವರ್ಗಗಳಿಗಾಗಿ ಎರಡು ಡಿಸಿಎಂ ಹುದ್ದೆಗಳ ಸೃಷ್ಟಿಸಬೇಕು ಎಂಬ ಒತ್ತಡ ನಿರ್ಮಿಸುವ ಪ್ರಯತ್ನ ಕಾಂಗ್ರೆಸ್‌ನಲ್ಲಿ ಆರಂಭಗೊಂಡಿದೆ. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿರುವ ಇಬ್ಬರು ಸಚಿವರ ಪರವಾಗಿ ಲಾಬಿ ನಡೆಯುತ್ತಿದೆ.
ಬೆಂಗಳೂರು: ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಗೆ ಕೇವಲ ಏಳು ತಿಂಗಳ ಅವಧಿ ಉಳಿದಿರುವ ಈ ಹಂತದಲ್ಲಿ ರಾಜ್ಯದಲ್ಲಿ ಲಿಂಗಾಯತ ಹಾಗೂ ದಲಿತ ವರ್ಗಗಳಿಗಾಗಿ ಎರಡು ಡಿಸಿಎಂ ಹುದ್ದೆಗಳ ಸೃಷ್ಟಿಸಬೇಕು ಎಂಬ ಒತ್ತಡ ನಿರ್ಮಿಸುವ ಪ್ರಯತ್ನ ಕಾಂಗ್ರೆಸ್ನಲ್ಲಿ ಆರಂಭಗೊಂಡಿದೆ. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿರುವ ಇಬ್ಬರು ಸಚಿವರ ಪರವಾಗಿ ಲಾಬಿ ನಡೆಯತೊಡಗಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ನೆರವಾಗಲು ಈ ನಿರ್ಧಾರ ನಿರ್ಧಾರ ಕೈಗೊಳ್ಳಬೇಕು ಎಂಬ ಬೇಡಿಕೆ ಹುಟ್ಟಿಕೊಂಡಿದೆ.
ಮೂಲಗಳ ಪ್ರಕಾರ, ಹೈಕಮಾಂಡ್ ಇಂತಹ ಬೇಡಿಕೆಗೆ ಸೊಪ್ಪು ಹಾಕದೇ ಇಂತಹ ವಿಚಾರಗಳನ್ನು ಪದೇ ಪದೇ ತರಬೇಡಿ ಎಂದು ತಾಕೀತು ಮಾಡಿದ್ದರೂ, ಪ್ರಯತ್ನ ಮಾತ್ರ ನಿಂತಿಲ್ಲ. ರಾಜ್ಯದ ಹಲವು ಪ್ರಭಾವಿ ಮಠಾಧೀಶರು ನೇರವಾಗಿ ಕಾಂಗ್ರೆಸ್ ಹೈಕಮಾಂಡ್ ಮೇಲೆ ಪ್ರಭಾವ ಬೀರುವ ಯತ್ನ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.

ಪಾಟೀಲರ ಪರ ಲಾಬಿ:
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ತಮ್ಮ ನೇತಾರ ಮಾಡಿಕೊಂಡು ಬಿಜೆಪಿ ಪರ ಒಗ್ಗೂಡಿದ್ದ ಲಿಂಗಾಯತ ಸಮುದಾಯವನ್ನು ಸ್ವತಂತ್ರ ಧರ್ಮ ಬೇಡಿಕೆ ಹುಟ್ಟುಹಾಕುವ ಮೂಲಕ ಯಶಸ್ವಿಯಾಗಿ ವಿಭಜಿಸಲಾಗಿದೆ. ಹೀಗೆ ವಿಭಜಿತಗೊಂಡಿರುವ ಒಂದು ಗುಂಪನ್ನು ಕಾಂಗ್ರೆಸ್ ಒಟ್ಟಿಗೆ ತರಲು ಇಂದಿನ ಸಂದರ್ಭ ಸಮರ್ಪಕವಾಗಿದೆ. ಇದು ಸಾಧ್ಯವಾಗಬೇಕಾದರೆ ಲಿಂಗಾಯತ ಸ್ವತಂತ್ರ ಧರ್ಮದ ಪರವಿರುವ ಎಂ.ಬಿ.ಪಾಟೀಲರಿಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ಕಲ್ಪಿಸಬೇಕು. ಈ ಸ್ಥಾನ ಕಲ್ಪಿಸಿದರೆ, ಇದು ನೇರವಾಗಿ ಮುಂದಿನ ಚುನಾವಣೆ ಮೇಲೆ ಪರಿಣಾಮ ಬೀರಲಿದ್ದು ಪಕ್ಷಕ್ಕೆ ಲಾಭವಾಗಲಿದೆ ಎಂಬುದು ಲಿಂಗಾಯತರಿಗೆ ಡಿಸಿಎಂ ಪದವಿ ನೀಡಬೇಕು ಎಂದು ಲಾಬಿ ನಡೆಸುತ್ತಿರುವವರ ವಾದ. ಇದು ಕೇವಲ ವಾದದ ಮಟ್ಟಿಗೆ ಸೀಮಿತವಾಗಿಲ್ಲ. ಪಕ್ಷದ ಮೂಲಗಳ ಪ್ರಕಾರ ಇಂತಹದೊಂದು ಆಗ್ರಹವನ್ನು ಪ್ರಮುಖ ಮಠಾಧೀಶರ ಮೂಲಕ ಹೈಕಮಾಂಡ್ನ ಮನವೊಲಿಸುವ ಪ್ರಯತ್ನವೂ ನಡೆದಿದೆ. ಈ ಬೆಳವಣಿಗೆಗಳು ನಡೆದ ಬೆನ್ನಲ್ಲೇ ಕಳೆದ ಐದು ವರ್ಷದಿಂದಲೂ ಡಿಸಿಎಂ ಪದವಿಗಾಗಿ ಬೇಡಿಕೆಯಿಟ್ಟುಕೊಂಡು ಬಂದಿರುವ ದಲಿತ ಮುಖಂಡರು ಸಹ ತಮ್ಮ ಆಗ್ರಹವನ್ನು ಹೈಕಮಾಂಡ್ ಮುಂದೆ ಪ್ರಬಲವಾಗಿ ಮಂಡಿಸಿದ್ದಾರೆ ಎನ್ನಲಾಗಿದೆ.
ದಲಿತರಿಂದಲೂ ಲಾಬಿ:
ಇದಕ್ಕೆ ಪ್ರತಿಯಾಗಿ ದಲಿತ ನಾಯಕರು ಸಹ ಲಾಬಿ ಆರಂಭಿಸಿದ್ದಾರೆ ಎನ್ನಲಾಗಿದೆ. ಸದಾ ಕಾಂಗ್ರೆಸ್ ಪರ ನಿಂತಿರುವ ದಲಿತರಿಗೆ ಮುಖ್ಯ ಮಂತ್ರಿ ಪದವಿ ನೀಡಬೇಕು ಎಂಬ ಬೇಡಿಕೆಯಿದೆ. ಕನಿಷ್ಠ ಡಿಸಿಎಂ ಪದವಿಯಾದರೂ ನೀಡಬೇಕು ಎಂದು ಕಳೆದ ಹಲವು ವರ್ಷಗಳಿಂದ ಬೇಡಿಕೆಯನ್ನು ಸಮುದಾಯ ಕಾಂಗ್ರೆಸ್ ಮುಂದಿಟ್ಟುಕೊಂಡು ಬಂದಿದೆ. ಇದನ್ನು ಇದುವರೆಗೂ ಪರಿಗಣಿಸದೇ ಲಿಂಗಾಯತರಿಗೆ ಡಿಸಿಎಂ ಪದವಿ ನೀಡಿದರೆ ದಲಿತ ಸಮುದಾಯಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಒಂದೋ ಡಿಸಿಎಂ ಹುದ್ದೆಯನ್ನು ಈ ಹಂತದಲ್ಲಿ ಸೃಷ್ಟಿಸಬಾರದು. ಒಂದು ವೇಳೆ ಚುನಾವಣೆ ಹಿತದ ಹೆಸರಿನಲ್ಲಿ ಡಿಸಿಎಂ ಪದವಿ ಸೃಷ್ಟಿಸುವುದಾದರೇ ದಲಿತರಿಗೂ ಡಿಸಿಎಂ ಪದವಿ ನೀಡಬೇಕು ಎಂದು ಹೈಕಮಾಂಡ್ ಮುಂದೆ ವಾದ ಮಂಡನೆ ಮಾಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಎರಡೂ ಆಗ್ರಹಕ್ಕೆ ಸಿದ್ದು ಬಣ ವಿರೋಧ:
ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಗುಂಪು, ‘ಈ ಎರಡು ವಾದಗಳಿಗೆ ಸೊಪ್ಪು ಹಾಕಬಾರದು. ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಪರ ವಾತಾವರಣವಿದೆ. ಈ ಸಂದರ್ಭದಲ್ಲಿ ಅನಗತ್ಯವಾಗಿ ಡಿಸಿಎಂ ಹುದ್ದೆ ಸೃಷ್ಟಿಸುವ ಪ್ರಯತ್ನ ಕಾಂಗ್ರೆಸ್ಗೆ ಆತ್ಮಹತ್ಯಾಕಾರಿ ನಿರ್ಣಯವಾಗುತ್ತದೆ. ಚುನಾವಣೆ ಅತ್ಯಂತ ಸಮೀಪವಿರುವ ಈ ಹಂತದಲ್ಲಿ ಇಂತಹ ಬೇಡಿಕೆಗಳಿಗೆ ಸೊಪ್ಪು ಹಾಕಬಾರದು ಹಾಗೂ ಇಂತಹ ಬೇಡಿಕೆ ಹುಟ್ಟು ಹಾಕುವವರಿಗೆ ಖಡಕ್ ಸೂಚನೆಯನ್ನು ನೀಡಬೇಕು ಎಂದು ಹೈಕಮಾಂಡ್ ಅನ್ನು ಆಗ್ರಹಿಸಿದೆ’ ಎಂದು ಮೂಲಗಳು ತಿಳಿಸಿವೆ. ಹೈಕಮಾಂಡ್ ಸಹ ಸಿದ್ದರಾಮಯ್ಯ ಬಣದ ವಾದಕ್ಕೆ ಮನ್ನಣೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ
