ಪಟನಾ(ಅ.03): ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ತಡೆ ನೀಡಿದ ಪಟನಾ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಕುರಿತಂತೆ ಅಕ್ಟೋಬರ್ 07 ರಂದು ವಿಚಾರಣೆ ನಡೆಯಲಿದೆ.

ಬಿಹಾರ ಸರ್ಕಾರ ಜಾರಿಗೆ ತಂದಿರುವ ‘ದಿ ಬಿಹಾರ್ ಪ್ರೊಹಿಬಿಷನ್ ಆ್ಯಂಡ್ ಎಕ್ಸೈಸ್ ಬಿಲ್ 2016' ಕಾಯ್ದೆಯು ಕಾನೂನು ಬಾಹಿರ ಎಂದು ಕಳೆದ ಎರಡು ದಿನಗಳ ಹಿಂದಷ್ಟೇ ಪಟನಾ ಹೈಕೋರ್ಟ್ ತೀರ್ಪು ನೀಡಿತ್ತು. ಈ ಹೊಸ ಬಿಲ್'ನ ಪ್ರಕಾರ ಮದ್ಯ ಸಂಗ್ರಹ, ತಯಾರಿಕೆ ಮಾಡುವುದು ಅಪರಾಧ. ಒಂದು ವೇಳೆ ಮನೆಯಲ್ಲಿ ಮದ್ಯ ಪತ್ತೆಯಾದರೆ ಕುಟುಂಬ ಸದಸ್ಯರನ್ನು ಬಂಧಿಸಲು ಅವಕಾಶವಿದೆ. ಇದಲ್ಲದೇ ಎಲ್ಲ ಸೆಕ್ಷನ್'ಗಳು ಜಾಮೀನುರಹಿತವಾಗಿದ್ದು ಆರೋಪಿಗೆ ಕೋರ್ಟ್ ಮಾತ್ರವೇ ಜಾಮೀನು ನೀಡಲು ಅವಕಾಶವಿದೆ.

ಭಾನುವಾರ ನಿತೀಶ್ ಕುಮಾರ್ ನೇತೃತ್ವದಲ್ಲಿ ವಿಶೇಷ ಸಂಪುಟ ಸಭೆ ಸೇರಿ ಸಾಮಾಜಿಕ ಬದಲಾವಣೆ ತರುವ ನಿಟ್ಟಿನಲ್ಲಿ ಮದ್ಯದ ಮೇಲೆ ನಿಷೇಧ ಮುಂದುವರೆಸುವ ತೀರ್ಮಾನ ತೆಗೆದುಕೊಂಡಿದೆ. ಇದರ ಜೊತೆಗೆ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುವ ತೀರ್ಮಾನ ಕೈಗೊಂಡಿದೆ.