50 ಸಾವಿರ ರೂಪಾಯಿಗಿಂತ ಹೆಚ್ಚು ಹಣದ ವಹಿವಾಟು ನಡೆಸುವಾಗಲೂ ಪ್ಯಾನ್ ನಂಬರ್ ಜೊತೆ ಆಧಾರ್ ನಂಬರನ್ನೂ ಒದಗಿಸಲು ಕಡ್ಡಾಯಗೊಳಿಸಲಾಗಿದೆ. ಜೊತೆಗೆ, ಹೊಸ ಬ್ಯಾಂಕ್ ಖಾತೆ ತೆರೆಯಲೂ ಕೂಡ ಇವೆರಡು ನಂಬರ್'ಗಳನ್ನ ಒದಗಿಸಬೇಕಾಗುತ್ತದೆ.

ನವದೆಹಲಿ(ಜೂನ್ 16): ಕೇಂದ್ರ ಸರಕಾರ ಆಧಾರ್ ಯೋಜನೆಯ ಪೂರ್ಣ ಅನುಷ್ಠಾನದ ಭಾಗವಾಗಿ ಇನ್ನೂ ಒಂದು ಹೆಜ್ಜೆ ಮುಂದಿರಿಸಿದೆ. ಬ್ಯಾಂಕ್ ಖಾತೆಗಳಿಗೆ ಪ್ಯಾನ್ ನಂಬರ್'ನಂತೆ ಆಧಾರ್ ನಂಬರನ್ನೂ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಆಧಾರ್ ನಂಬರ್ ಇಲ್ಲದ ಬ್ಯಾಂಕ್ ಖಾತೆಗಳನ್ನು ನಿಲ್ಲಿಸಲು ಕಂದಾಯ ಇಲಾಖೆಯು ಬ್ಯಾಂಕುಗಳಿಗೆ ನೋಟಿಫಿಕೇಶನ್ ನೀಡಿದೆ. ಹಾಲಿ ಬ್ಯಾಂಕ್ ಖಾತೆ ಹೊಂದಿರುವವರು ತಮ್ಮ ಆಧಾರ್ ಕಾರ್ಡ್'ನ ನಂಬರನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಲು ಡಿಸೆಂಬರ್ 31 ಅಂತಿಮ ದಿನಾಂಕವಾಗಿದೆ.

ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್'ಗಳನ್ನು ಮಾಡಿಟ್ಟುಕೊಂಡು ವಂಚಿಸುತ್ತಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಸರಕಾರವು ಆಧಾರ್ ನಂಬರನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ.

50 ಸಾವಿರ ರೂಪಾಯಿಗಿಂತ ಹೆಚ್ಚು ಹಣದ ವಹಿವಾಟು ನಡೆಸುವಾಗಲೂ ಪ್ಯಾನ್ ನಂಬರ್ ಜೊತೆ ಆಧಾರ್ ನಂಬರನ್ನೂ ಒದಗಿಸಲು ಕಡ್ಡಾಯಗೊಳಿಸಲಾಗಿದೆ. ಜೊತೆಗೆ, ಹೊಸ ಬ್ಯಾಂಕ್ ಖಾತೆ ತೆರೆಯಲೂ ಕೂಡ ಇವೆರಡು ನಂಬರ್'ಗಳನ್ನ ಒದಗಿಸಬೇಕಾಗುತ್ತದೆ.

ಬ್ಯಾಂಕ್ ಅಕೌಂಟ್'ಗೂ ಆಧಾರ್ ಕಡ್ಡಾಯವಾಗುತ್ತಿರುವುದರಿಂದ ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಮಾಡಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ರತಿಯೊಬ್ಬ ನಾಗರಿಕನೂ ಆಧಾರ್ ಕಾರ್ಡ್ ಮಾಡಿಸಬೇಕೆಂದು ಕೇಂದ್ರ ಸರಕಾರವು ಪರೋಕ್ಷವಾಗಿ ಕಡ್ಡಾಯಗೊಳಿಸುತ್ತಿರುವಂತಿದೆ.